×
Ad

ವಿಷಾಹಾರ ಸೇವನೆ ಪ್ರಕರಣ: ಮೃತರ ಸಂಖ್ಯೆ 4ಕ್ಕೆ ಏರಿಕೆ

Update: 2017-03-12 12:29 IST

ತುಮಕೂರು, ಮಾ.12: ಚಿಕ್ಕನಾಯಕನ ಹಳ್ಳಿಯ ವಿದ್ಯಾವಾರಿಧಿ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಹಾಸ್ಟೆಲ್‌ನಲ್ಲಿ ಸಂಭವಿಸಿದ ವಿಷಾಹಾರ ಸೇವನೆ ದುರಂತಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ನಾಲ್ಕಕ್ಕೇರಿದೆ.

ವಿಷಾಹಾರ ಸೇವನೆಯಿಂದ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಹುಳಿಯೂರು ನಿವಾಸಿ, ಹಾಸ್ಟೆಲ್ ಸೆಕ್ಯುರಿಟಿ ಗಾರ್ಡ್ ರಮೇಶ್ ಇಂದು ಪೂರ್ವಾಹ್ನ 11 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. 

ಹುಳಿಯಾರು ಗ್ರಾಮದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಬೋರ್ಡಿಂಗ್ ಶಾಲೆಯಲ್ಲಿ ಮಾ.9ರಂದು ಸಂಭವಿಸಿದ ಈ ದುರಂತದಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ರಮೇಶ್ ಹಾಗೂ ಇನ್ನೋರ್ವ ವಿದ್ಯಾರ್ಥಿ ಸುದರ್ಶನ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು.

ವಿದ್ಯಾರ್ಥಿಗಳಾದ ಶಾಂತಮೂರ್ತಿ, ಆಕಾಂಕ್ಷ ಪಲ್ಲಕ್ಕಿ ಮತ್ತು ಶ್ರೇಯಸ್ ಎಂದು ಮೃತಪಟ್ಟಿದ್ದರು. ಇನ್ನೋರ್ವ ವಿದ್ಯಾರ್ಥಿ  ಸುದರ್ಶನ್ ಹಾಗೂ ವಸತಿ ಶಾಲೆಯ ಗಾರ್ಡ್ ರಮೇಶ್ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಸ್ಥಿತಿ ಗಂಭೀರವಾಗಿತ್ತು.  8ನೆ ತರಗತಿಯ ವಿದ್ಯಾರ್ಥಿಯಾಗಿರುವ ಸುದರ್ಶನ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಂದು ತಿಂಗಳ ಹಿಂದೆಯಷ್ಟೇ ಹಾಸ್ಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ ರಮೇಶ್ ಅವರು ಪತ್ನಿ ಹಾಗೂ ಇಬ್ಬರು ಸಣ್ಣ ಮಕ್ಕಳನ್ನು ಅಗಲಿದ್ದಾರೆ.

ಇದೇ ವೇಳೆ ದುರಂತಕ್ಕೆ ಸಂಬಂಧಿಸಿ ವಿದ್ಯಾವಾರಿಧಿ ಶಾಲಾಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮತ್ತು ಅವರ ಪತ್ನಿ, ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಕವಿತಾ ಕಿರಣ್ ನಿನ್ನೆ ರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ.

ಅನುಮತಿ ಇಲ್ಲದೆ ಹಾಸ್ಟೆಲ್ ನಡೆಸುತ್ತಿದ್ದ ಹಾಗೂ ಸಮರ್ಪಕ ಮೇಲುಸ್ತುವಾರಿ ವ್ಯವಸ್ಥೆ ಕಲ್ಪಿಸದಿರುವ ಹಿನ್ನೆಲೆಯಲ್ಲಿ ಇವರ ವಿರುದ್ಧ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News