ಬೇಕರಿ ಕೇಕ್ ತಿಂದು ಐವರು ಅಸ್ವಸ್ಥ
ತುಮಕೂರು, ಮಾ.12: ಬೇಕರಿಯಿಂದ ತಂದ ಕೇಕ್ ತಿಂದು ಐವರು ಅಸ್ವಸ್ಥಗೊಂಡ ಘಟನೆ ಇಲ್ಲಿನ ತೋವಿನಕೆರೆ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಪ್ರೇಮಾ(15), ಗಂಗಮ್ಮ(20), ಆಶಾ(19) ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಐವರು ಅಸ್ವಸ್ಥಗೊಂಡವರು. ಇವರು ತೋವಿನಕೆರೆಯ ಭೈರವೇಶ್ವರ ಬೇಕರಿಯಿಂದ ಕೇಕ್ ತಂದು ತಿಂದಿದ್ದ ಅಸ್ವಸ್ಥರಾಗಿದ್ದಾರೆ. ಕೇಕ್ ತಿಂದ ಬಳಿಕ ಇವರು ತೀವ್ರ ವಾಂತಿ-ಭೇದಿಗೊಳಗಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀವ್ರ ಅಸ್ವಸ್ಥಗೊಂಡ ಇಬ್ಬರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರಿಗೆ ತೊವಿನಕೆರೆ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಒಬ್ಬರನ್ನು ಮಧುಗಿರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಾಹಾರ ಸೇವನೆಯಿಂದ ನಾಲ್ವರು ಮೃತಪಟ್ಟ ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿಷ ಆಹಾರ ಸೇವನೆ ಪ್ರಕರಣ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.