×
Ad

ವಿಷ ಆಹಾರದಿಂದ ನಾಲ್ವರ ಸಾವು ಪ್ರಕರಣ: ತನಿಖೆ ಸಮರ್ಪಕವಾಗಿ ನಡೆಯುತ್ತಿದೆ; ಎಸ್ಪಿ ಇಶಾಪಂತ್

Update: 2017-03-12 19:19 IST

ತುಮಕೂರು.ಮಾ.12:ವಿಷ ಆಹಾರ ಸೇವಿಸಿ ಮೂವರು ಮಕ್ಕಳು ಮತ್ತು ಓರ್ವ ಸೆಕ್ಯೂರಿಟಿ ಗಾರ್ಡು ಸಾವನ್ನಪ್ಪಿರುವ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಒತ್ತಡಕ್ಕೆ ಮಣಿಯದೆ ನ್ಯಾಯಯುತ ತನಿಖೆ ನಡೆಸಿ ಸಚಿತ್ರಸರಿಗೆ ನ್ಯಾಯ ಒದಗಿಸಲಿದೆ ಎಂಬ ವಿಶ್ವಾಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಇಶಾಪಂತ್ ವ್ಯಕ್ತಪಡಿಸಿದ್ದಾರೆ.

ವಿಷ ಆಹಾರ ಸೇವಿಸಿ ಕಳೆದ ನಾಲ್ಕು ದಿನಗಳಿಂದ ಜಿಲ್ಲಾಸ್ಪತ್ರೆಯ ಐಸಿಯು ನಲ್ಲಿ ಜೀವ್ಮನರಣ ಹೋರಾಟ ನಡೆಸಿ ರವಿವಾರ ಕೊನೆಯುಸಿರೆಳೆದ ಸೆಕ್ಯೂರಿಟಿ ಗಾರ್ಡು ರಮೇಶ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಕ್ಕಳ ದೇಹದಲ್ಲಿ ದೊರೆತಿರುವ ವಿಷವನ್ನು ಎಫ್.ಎಸ್.ಐ.ಎಲ್ ವರದಿಗೆ ಕಳುಹಿಸಲಾಗಿದೆ.ಆಲಿಂದ ವರದಿ ಬಂದ ನಂತರ ಮಕ್ಕಳ ದೇಹದಲ್ಲಿರುವುದು ರಸಾಯನಿಕಯುಕ್ತ ವಿಷವೇ, ಇಲ್ಲವೇ ಬಯೋಪಾಯಿಸನ್ ಎಂದು ತಿಳಿದು ಬರಲಿದೆ. ರಸಾಯನಿಕ ವಿಷವಾದರೆ ಬೇರೆ ಯಾರೋ ತಂದು ಹಾಕಿರಲೇಬೇಕು. ಈ ನಿಟ್ಟಿನಲ್ಲಿ ಎಫ್.ಎಸ್.ಐ.ಎಲ್ ವರದಿಗಾಗಿ ಕಾಯುತ್ತಿದ್ದೇವೆ ಎಂದರು.

ಮೃತರ ಪೋಷಕರಿಂದ ದೂರು ಪಡೆದು ಎಫ್.ಐ.ಆರ್ ದಾಖಲಿಸಿಲ್ಲ ಎಂಬುದು ಸರಿಯಿದ್ದರೂ ದೂರು ನೀಡಿರುವ ವ್ಯಕ್ತಿಯ ಮಗನು ಸಹ ಇದೇ ಹಾಸ್ಟಲ್‌ನಲ್ಲಿ ಓದುತ್ತಿದ್ದ ವಿದ್ಯಾರ್ಥಿಯಾಗಿದ್ದಾನೆ. ಹಾಗಾಗಿ ಅವರ ದೂರನ್ನು ಪರಿಗಣಿಸಲಾಗಿದೆ. ಅಗತ್ಯ ಬಿದ್ದಲ್ಲಿ ಮೃತ ಮಕ್ಕಳ ಪೋಷಕರಿಂದ ದೂರು ಪಡೆಯಲಾಗುವುದು ಎಂದರು.

ಘಟನೆ ನಡೆದ ದಿನ ಶಾಲೆಯ ಅಧ್ಯಕ್ಷ ಕಿರಣ್‌ಕುಮಾರ್ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಬಂದಿದ್ದು ನಿಜ. ಆದರೆ ಆ ವೇಳೆ ಯಾವುದೇ ದೂರು ದಾಖಲಾಗಿರಲಿಲ್ಲ. ಹಾಗಾಗಿ ಅವರನ್ನು ಬಂಧಿಸಲಿಲ್ಲ. ಎಫ್.ಐ.ಆರ್. ದಾಖಲಾದ ಮೇಲೆ ಅವರು ಬೆಂಗಳೂರಿನಲ್ಲಿರುವ ಅವರ ಸಹೋದರಿಯ ಮನೆಯಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ ಚಿಕ್ಕನಾಯಕನಹಳ್ಳಿ ಪಿ.ಎಸೈ ಮತ್ತು ಸಿಪಿಐ ಬೆಂಗಳೂರಿನ ಅವರ ಸಹೋದರಿಯ ಮನೆಗೆ ಹೋಗಿ ಹುಡುಕಾಟ ನಡೆಸಲಾಯಿತು.

ಅಲ್ಲದೆ, ಎಲ್ಲ ಕಡೆಯಿಂದ ಪೊಲೀಸರು ಹುಡುಕಾಟ ಪ್ರಾರಂಭಿಸಿದ ನಂತರ ಅನಿವಾರ್ಯವಾಗಿ ಪೊಲೀಸರ ಮುಂದೆ ಪ್ರಮುಖ ಆರೋಪಿಗಳ ಕಿರಣ್‌ಕುಮಾರ್ ಮತ್ತು ಕವಿತಾ ಶರಣಾಗಿದ್ದರು. ಐಪಿಸಿ ಕಲಂ 304(ಎ)ಜಾಮೀನು ಸಿಗುವ ಕೇಸು ಆದ ಕಾರಣ ತಕ್ಷಣವೇ ಜಾಮೀನು ದೊರೆತಿದೆ.ಇನ್ನ ಮುಂದೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗುವುದು ಎಂದು ಶ್ರೀಮತಿ ಇಶಾಪಂತ್ ನುಡಿದರು.

ಈ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿ.ಮಂಜುನಾಥ್,ನಗರ ಡಿವೈಎಸ್ಪಿ, ಜಿಲ್ಲಾ ಸರ್ಜನ ಡಾ.ವೀರಭದ್ರಯ್ಯ, ಆರ್.ಎಂ.ಓ ಡಾ.ರುದ್ರಮೂರ್ತಿ ಮತ್ತಿತರರು ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News