×
Ad

ರಸ್ತೆ ಬದಿ ಮಗುವಿಗೆ ಜನ್ಮ ನೀಡಿದ ತಾಯಿ, ನೆರವಿಗೆ ಧಾವಿಸಿದ ಭಿಕ್ಷುಕ ಮಹಿಳೆ!

Update: 2017-03-13 15:18 IST

ರಾಯಚೂರು, ಮಾ.11: ಮಾರ್ಗಮಧ್ಯದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಾಗ ಅಪರಿಚಿತ ಹಿರಿಯ ಮಹಿಳೆಯೊಬ್ಬರು ಸೂಲಗತ್ತಿಯಾಗಿ ಹೆರಿಗೆಯನ್ನು ಯಶಸ್ವಿಯಾಗಿ ನೆರವೇರಿಸಿದ ಘಟನೆ ಉತ್ತರ ಕರ್ನಾಟದಲ್ಲಿ ನಡೆದಿದೆ. ಈ ಘಟನೆ ಈಗಲೂ ಒಳ್ಳೆಯ ಜನರಿದ್ದಾರೆ ಎಂದು ತೋರಿಸಿಕೊಟ್ಟಿದೆ.

‘ಬಿಸಿಲ ನಾಡು’ ರಾಯಚೂರಿನಲ್ಲಿ ಎಲ್ಲಮ್ಮ ಎಂಬ ಹೆಸರಿನ ತುಂಬು ಗರ್ಭಿಣಿ ಮಾನ್ವಿ ತಾಲೂಕಿನ ಜನನಿಬಿಡ ಸ್ಥಳದಲ್ಲಿ ಹೆರಿಗೆ ಹೊಟ್ಟೆನೋವು ತಾಳಲಾರದೇ ಕುಸಿದುಬಿದ್ದಿದ್ದಾರೆ. ಮಹಿಳೆಯ ಜೊತೆಗಿದ್ದ ಪತಿಗೆ ಏನು ಮಾಡುವುದೆಂದು ಗೊತ್ತಾಗಲಿಲ್ಲ. ಆಗ ಅವರಿಗೆ ನೆರವಿಗೆ ಬಂದಿದ್ದು ಅಲ್ಲೆ ರಸ್ತೆಬದಿಯಲ್ಲಿ ಭಿಕ್ಷೆ ಬೀಡುತ್ತಿದ್ದ 60ರ ಪ್ರಾಯದ ಮಹಿಳೆ.

ರಸ್ತೆ ಬದಿಯಲ್ಲಿ ಸೂಲಗಿತ್ತಿಯಾಗಿ ಎಲ್ಲಮ್ಮಳ ನೆರವಿಗೆ ನಿಂತ ಅಜ್ಜಿ ಆರೋಗ್ಯಕರ ಹೆಣ್ಣುಮಗುವಿಗೆ ಜನ್ಮ ನೀಡಲು ನೆರವಾದರು. ‘‘ಇದು ಪಟ್ಟಣದಲ್ಲಿ ನಡೆದ ಅತ್ಯಂತ ಮನಕಲಕುವ ಘಟನೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಉತ್ತರಕರ್ನಾಟಕದ ಜನರು ಅಪಘಾತದಂತಹ ಅಹಿತಕರ ಘಟನೆ ನಡೆದಾಗ ಅವರ ನೆರವಿಗೆ ಬರುವ ಬದಲು ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಹೆಚ್ಚು ಆಸಕ್ತಿ ತೋರುತ್ತಾರೆ. ಎಲ್ಲಮ್ಮರ ನೆರವಿಗೆ ಬಂದಿರುವ ಭಿಕ್ಷುಕಿ ಎಲ್ಲರಿಗೂ ಮಾದರಿಯಾಗಿದ್ದಾರೆ’’ ಎಂದು ಮಾನ್ವಿ ತಾಲೂಕಿನ ಶಾಸಕ ಹಂಪಯ್ಯ ನಾಯಕ ಹೇಳಿದ್ದಾರೆ.

 ಸನ್ನಾ ಬಝಾರ್ ನಿವಾಸಿ ಎಲ್ಲಮ್ಮಾ ಹಾಗೂ ಕೃಷಿಕ ರಾಮಣ್ಣರಿಗೆ ಮೂವರು ಗಂಡುಮಕ್ಕಳಿದ್ದಾರೆ. 4ನೆ ಮಗುವಿನ ನಿರೀಕ್ಷೆಯಲ್ಲಿದ್ದ ಈ ದಂಪತಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗಾಗಿ ಬಂದಿದ್ದರು. ಎಲ್ಲಮ್ಮನಿಗೆ ರಕ್ಷಹೀನತೆ ಇರುವ ಕಾರಣ ರಾಯಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆ(ರಿಮ್ಸ್)ಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು. ವೈದ್ಯರ ಸೂಚನೆಯಲ್ಲಿ ರಾಯಚೂರಿಗೆ ತೆರಳಿ ಮಾನ್ವಿಗೆ ವಾಪಸಾದ ಬಳಿಕ ಬೆಳಗ್ಗೆ 9:30ಕ್ಕೆ ಈ ಘಟನೆ ನಡೆದಿದೆ.

ಬಸ್‌ನಿಂದ ಇಳಿದ ತಕ್ಷಣ ಎಲ್ಲಮ್ಮರಿಗೆ ನಿಲ್ಲಲು ಸಾಧ್ಯವಾಗದೇ ಕುಸಿದುಬಿದ್ದರು. ರಕ್ತ ಸ್ರಾವ ಉಂಟಾದಾಗ ಪತಿಗೆ ಏನು ಮಾಡುವುದೆಂದು ತೋಚಲಿಲ್ಲ. ಆಗ 60ರ ಪ್ರಾಯದ ಭಿಕ್ಷುಕಿಯೊಬ್ಬರು ಎಲ್ಲಮ್ಮರ ನೆರವಿಗೆ ಧಾವಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅಜ್ಜಿ ಸೂಲಗಿತ್ತಿಯ ಪಾತ್ರವಹಿಸಿದರು. ಅಕ್ಕಪಕ್ಕದ ಇತರ ಮಹಿಳೆಯರು ಅಜ್ಜಿಗೆ ನೆರವಾದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಎಲ್ಲಮ್ಮರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲಮ್ಮರ ನೆರವಿಗೆ ಬಂದಿದ್ದ ಆ ಅಪರಿಚಿತ ಅಜ್ಜಿ ಜನಜಂಗುಳಿಯ ಮಧ್ಯೆ ಎಲ್ಲಿಗೆ ಹೋದರೆಂದು ಗೊತ್ತಾಗಲಿಲ್ಲ. ಎಲ್ಲಮ್ಮರ ನೆರವಿಗೆ ಬಂದವರು ಶ್ರೀಮಂತರಲ್ಲ. ಅವರು ಹೃದಯವಂತರು. ಈಗಲೂ ಒಳ್ಳೆಯ ಜನರಿದ್ದಾರೆ ಎನ್ನಲು ಈ ಘಟನೆ ಸಾಕ್ಷಿ’’ ಎಂದು ಶಾಸಕ ಹಂಪಯ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News