ಮಾರಣಾಂತಿಕ ಹಲ್ಲೆಗೈದ ಆರೋಪಿಗೆ ಜೈಲು ಶಿಕ್ಷೆ
ಚಿಕ್ಕಮಗಳೂರು, ಮಾ.13: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆಗೈದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
ಕಳೆದ 12 ವರ್ಷಗಳ ಹಿಂದೆ ಆರೋಪಿ ಮಂಜು ಎಂಬಾತನು ಮೂಡಿಗೆರೆ ಬಸ್ ನಿಲ್ದಾಣದ ಬಳಿ ಇದ್ದ ಪ್ರೇಮ ಎಂಬವರ ತಾಯಿ ಕಲ್ಯಾಣಮ್ಮರನ್ನು ಮನೆಗೆ ಕರೆದೊಯ್ದು ಸಂಸಾರ ಮಾಡಿಕೊಂಡಿದ್ದನು. ಆಗಾಗ ಸಂಸಾರಿಕ ವಿಚಾರವಾಗಿ ಮನೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದು, 2015 ರ ಅ:30 ರಂದು ಮಧ್ಯಾಹ್ನ 3:30ರ ಸಮಯದಲ್ಲಿ ಗಲಾಟೆ ಮಾಡಿ ದೊಣ್ಣೆಯಿಂದ ಕೊಲೆ ಮಾಡುವ ಉದ್ದೇಶದಿಂದ ಕಲ್ಯಾಣಮ್ಮಳ ಕೈ ಕಾಲಿಗೆ, ತಲೆಗೆ, ಮುಖಕ್ಕೆ ಹೊಡೆದು ಕೊಲೆ ಮಾಡಿದ್ದನು.
ಈ ಹಿನ್ನೆಲೆ ಮೂಡಿಗೆರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಲಂ 302 ರ ಅನ್ವಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ್ ಅವರು ಆರೋಪಿ ಮಂಜು ಅವರಿಗೆ ಕಲಂ 302 ರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ರೂ. 5,000 ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆ ಕುಲಕರ್ಣಿ ಮೊಕದ್ದಮೆಯನ್ನು ನಡೆಸಿದರು.