ಮಂಡ್ಯ: ಟ್ರ್ಯಾಕ್ಟರ್ ಹಳ್ಳಕ್ಕೆ ಬಿದ್ದು ಇಬ್ಬರು ಕಾರ್ಮಿಕರ ಸಾವು
ಮಂಡ್ಯ, ಮಾ.13: ವಿದ್ಯುತ್ ಕಂಬ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಇಲ್ಲಿನ ಕಾವೇರಿ ನಗರದ ಸಮೀಪ ಸೋಮವಾರ ಸಂಜೆ ನಡೆದಿದೆ.
ತಾಲೂಕಿನ ಹೊಳಲು ಗ್ರಾಮದ ಕೆಂಪಣ್ಣ ಅವರು ಪುತ್ರ ಎಚ್.ಎಸ್.ಸುರೇಶ್ (45) ಹಾಗೂ ಶ್ರೀರಂಗಪಟ್ಟಣ ತಾಲೂಕು ಅರಕೆರೆ ಹೋಬಳಿಯ ಚೊಟ್ಟನಹಳ್ಳಿ ಗ್ರಾಮದ ತಿಮ್ಮೇಗೌಡ (53) ಸಾವನ್ನಪ್ಪಿದ ಕಾರ್ಮಿಕರು.
ಸೆಸ್ಕ್ ಕಚೇರಿ ಆವರಣದಿಂದ ಕಾವೇರಿ ನಗರಕ್ಕೆ ವಿದ್ಯುತ್ ಕಂಬ ಸಾಗಿಸುತ್ತಿದ್ದಾಗ ಮುಂದಿನ ಟೈರ್ ಪಂಕ್ಚರ್ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರ್ಯಾಕ್ಟರ್ ರಸ್ತೆಬದಿ ಹಳ್ಳಕ್ಕೆ ಉರುಳಿ ಟ್ರ್ಯಾಕ್ಟರ್‌ನಲ್ಲಿದ್ದ ಕಾರ್ಮಿಕರ ಮೇಲೆ ವಿದ್ಯುತ್ ಕಂಬಗಳು ಬಿದ್ದಿವೆ.
ತಿಮ್ಮೇಗೌಡ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಸುರೇಶ್ ಮೈಸೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ನಗರದ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿಗೆ ಆಗಮಿಸಿದ ಮೃತರ ಸಂಬಂಧಿಕರ ರೋದನ ಮುಗಿಲುಮುಟ್ಟಿತ್ತು.