ವಿದ್ಯಾವಾರಿಧಿ ವಸತಿ ಶಾಲೆ ಮಕ್ಕಳ ಸಾವಿನ ದುರಂತ: ಹತ್ತು ದಿನಗಳೊಳಗಾಗಿ ಪ್ರಯೋಗಾಲಯದ ವರದಿ
ತುಮಕೂರು,ಮಾ.13: ಹುಳಿಯಾರಿನ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್ ವಸತಿ ಶಾಲೆಯಲ್ಲಿ ಇತ್ತೀಚೆಗೆ ವಿಷ ಮಿಶ್ರಿತವೆನ್ನಲಾದ ಆಹಾರ ಸೇವೆನೆಯಿಂದ ಮೂವರು ಮಕ್ಕಳು ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯ ಅಡಿಗೆ ಕೋಣೆಯಲ್ಲಿದ್ದ ಆಹಾರ ತಯಾರಿಕೆಗೆ ಬಳಸಲಾಗುವ 17 ವಿವಿಧ ಕಚ್ಚಾ ಸಾಮಗ್ರಿಗಳು ಸೇರಿ ವಿವಿಧ ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಹತ್ತು ದಿನಗಳೊಳಗಾಗಿ ವರದಿ ಬರಲಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಪ್ರಕರಣ ಕುರಿತಂತೆ ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ವಸತಿ ಶಾಲೆಯ ಅಡಿಗೆ ಕೋಣೆಯಲ್ಲಿ ಮಕ್ಕಳ ಊಟಕ್ಕಾಗಿ ತಯಾರಿಸಿಟ್ಟಿದ್ದ ಅನ್ನ, ಸಾರು, ಮಕ್ಕಳ ವಾಂತಿಯ ಮಾದರಿ ಹಾಗೂ ಶಾಲಾ ಆವರಣದ ಬಳಿಯಿರುವ ದಾಳಿಂಬೆ ಎಲೆಗಳನ್ನು ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಸಾರ್ವಜನಿಕ ಆರೋಗ್ಯ ಸಂಸ್ಥೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಹೇಳಿದರು.
ಕೊರಟಗೆರೆ ತಾಲೂಕು ತೋವಿನಕೆರೆಯ ಭೈರವೇಶ್ವರ ಬೇಕರಿಯಿಂದ ಖರೀದಿಸಲಾದ ಹನಿ ಕೇಕ್ ತಿಂದು ಐವರು ಅಸ್ವಸ್ಥರಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾಧಿಕಾರಿ, ಗುಣಮಟ್ಟವಿಲ್ಲದ ಬೇಕರಿ ಉತ್ಪನ್ನ ಹಾಗೂ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುವ ಮಾಲಕರ ವಿರುದ್ಧ ಕೂಡಲೇ ಕ್ರಮ ಜರಗಿಸಬೇಕೆಂದು ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿಗೆ ಸೂಚಿಸಿದರಲ್ಲದೆ, ಅಂಥವರ ಪರವಾನಗಿ ಹಾಗೂ ನೋಂದಣಿಯನ್ನು ರದ್ದುಗೊಳಿಸಬೇಕು. ತಿನಿಸುಗಳು ಅಸುರಕ್ಷಿತವೆಂದು ಪ್ರಯೋಗಾಲಯದಿಂದ ವರದಿ ಬಂದಲ್ಲಿ ಕೂಡಲೇ ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕೆಂದು ತಾಕೀತು ಮಾಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ವೀರಭದ್ರಯ್ಯ ಮಾತನಾಡಿ, ಮಕ್ಕಳು ತಿಂದ ಆಹಾರದಲ್ಲಿ ತೆಂಗಿನ ಬೆಳೆಯಲ್ಲಿ ಕೀಟ ನಿಯಂತ್ರಣಕ್ಕಾಗಿ ಬಳಸಲಾಗುವ ಅಲ್ಯುಮಿನಿಯಂ ಫಾಸ್ಫೈಡ್ ಎಂಬ ರಾಸಾಯನಿಕ ಮಿಶ್ರಣವಾಗಿರಬಹುದೆಂದು ಶಂಕಿಸಲಾಗಿದೆ ಎಂದರು.
ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ. ಪುರುಷೋತ್ತಮ್ ಮಾತನಾಡಿ, ವಸತಿ ಶಾಲೆಯ ಸ್ಥಳ ಪರಿಶೀಲನೆ ನಡೆಸಿದಾಗ ಅಡಿಗೆ ಕೋಣೆಯಲ್ಲಿ ಸ್ವಚ್ಛತೆ ಇಲ್ಲದಿರುವುದು, ಕಿಟಕಿಯ ಬಾಗಿಲುಗಳು ತೆರೆದಿರುವುದು ಕಂಡುಬಂದಿದೆ. ಈ ಹಿಂದೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪರೀಕ್ಷೆಗಾಗಿ ಜಿಲ್ಲಾ ಸರ್ವೆಲೆನ್ಸ್ ಘಟಕದ ಆರೋಗ್ಯ ಕಾರ್ಯಕರ್ತರು ವಸತಿ ಶಾಲೆಗೆ ಭೇಟಿ ನೀಡಿದಾಗ ಶಾಲೆಯ ಆಡಳಿತ ಮಂಡಳಿಯು ಒಳಗೆ ಪ್ರವೇಶಿಸಲು ಅವಕಾಶ ನೀಡುತ್ತಿರಲಿಲ್ಲವೆಂದು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಷಾಪಂತ್ ಮಾತನಾಡಿ, ವಿಧಿ ವಿಜ್ಞಾನ ಸಂಸ್ಥೆಯಿಂದ ವರದಿ ಬಂದ ಕೂಡಲೇ ತನಿಖೆಯನ್ನು ಚುರುಕುಗೊಳಿಸಿ ಘಟನೆಗೆ ಕಾರಣವೇನೆಂದು ಪತ್ತೆ ಹಚ್ಚಲಾಗುವುದು.ತನಿಖೆಗೆ ಸಂಬಂಧಪಟ್ಟಂತೆ ಎಲ್ಲಾ ಇಲಾಖೆಗಳು ಸಹಕರಿಸಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ, ಶಿಕ್ಷಣ ಇಲಾಖೆಯ ಕಾಮಾಕ್ಷಮ್ಮ, ತಿಪಟೂರು ಡಿವೈಎಸ್ಪಿ ವೇಣುಗೋಪಾಲ್, ಆರೋಗ್ಯ ಇಲಾಖೆಯ ಎಪಿಡೆಮಿಯಾಲಜಿಸ್ಟ್, ಮೈಕ್ರೋ ಬಯೋಲಜಿಸ್ಟ್, ಮತ್ತಿತರರು ಹಾಜರಿದ್ದರು.