ಸ್ವರಾಜ್ ಇಂಡಿಯಾ ಜೊತೆ ಸರ್ವೋದಯ ವಿಲೀನ: ದೇವನೂರ ಮಹದೇವ

Update: 2017-03-13 16:53 GMT

ಮೈಸೂರು, ಮಾ.13: ಸ್ವರಾಜ್ ಇಂಡಿಯಾ ಜೊತೆಗೆ ಸರ್ವೋದಯ ಕರ್ನಾಟಕ ಪಕ್ಷವನ್ನು ವಿಲೀನಗೊಳಿಸಲು ನಿರ್ಧರಿಸಲಾಗಿದೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ, ಸಾಹಿತಿ ದೇವನೂರ ಮಹದೇವ ತಿಳಿಸಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸ್ವರಾಜ್‌ಇಂಡಿಯಾದಲ್ಲಿ ಸರ್ವೋದಯ ಕರ್ನಾಟಕ ಪಕ್ಷ ವಿಲೀನಗೊಳ್ಳಲಿದೆ. ಸುಮಾರು 10 ವರ್ಷಗಳಿಂದ ವಿಶೇಷ ರೀತಿಯಲ್ಲಿ ತೊಡಗಿಸಿಕೊಳ್ಳಲು, ವಿಸ್ತರಿಸಿಕೊಳ್ಳಲು ಕಾತರಿಸುತ್ತಿದ್ದ ನಮಗೆ ಸ್ವರಾಜ್ ಪಕ್ಷದರೂಪದಲ್ಲಿ ಕಾಲ ಕೂಡಿ ಬಂದಿದೆ. ಪ್ರಸ್ತುತ ಕಾಲ ಘಟ್ಟದಲ್ಲಿ ರಚನಾತ್ಮಕ ರಾಜಕಾರಣ ಕಟ್ಟುವುದು ತುಂಬಾ ಕಷ್ಟದ ಕೆಲಸ. ಅದರ ನಡುವೆಯೇ ನಾವು ಕಾರ್ಯಶೀಲರಾಗಲೇಬೇಕಿದೆ ಎಂದರು.

 ವಿವೇಕದಿಂದ ಮತ್ತು ಪ್ರಾಯೋಗಿಕವಾಗಿ ರಾಜಕೀಯ ಕ್ಷೇತ್ರದಲ್ಲಿ ಸ್ವರಾಜ್ ಸ್ಥಾಪನೆಯಾಗಿದೆ. ನಮ್ಮ ಪಕ್ಷದ ವಿಲೀನದ ವಿಚಾರ ದಿಢೀರ್ ನಿರ್ಧಾರವಲ್ಲ. ಆಮ್‌ಆದ್ಮಿ ಪಕ್ಷ(ಎಎಪಿ)ವು ಹೊಸದಿಲ್ಲಿಯಲ್ಲಿ ಸರ್ಕಾರ ರಚಿಸುವ ಮೂಲಕ ಭಾರತದ ರಾಜಕಾರಣಕ್ಕೆ ಧಿಕ್ಕಾಗುತ್ತದೆ ಎಂಬ ಆಸೆಯನ್ನು ಮೂಡಿಸಿತ್ತು. ಹಾಗಾಗಿ ಚಿಂತನೆ ಇತ್ತು. ಅಷ್ಟರಲ್ಲಿ ಅದು ವಿಘಟನೆಯಾಗಿ ರಾಜಕಾರಣವನ್ನು ದಿಕ್ಕೆಡಿಸಿತು ಎಂದು ವಿಷಾದ ವ್ಯಕ್ತಪಡಿಸಿದರು.

ಎಎಪಿಯಿಂದ ಹೊರಬಿದ್ದ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಪ್ರೊ.ಆನಂದ್‌ಕುಮಾರ್ ಮತ್ತಿತರರು ತಳಮಟ್ಟದಿಂದ ರಾಜಕಾರಣ ಕಟ್ಟಲು ರಾಷ್ಟ್ರೀಯ ಮಟ್ಟದಲ್ಲಿ ಸ್ವರಾಜ್‌ಅಭಿಯಾನ ಆರಂಭಿಸಿದ್ದರು. ಅದರಲ್ಲಿ ಜೈಕಿಸಾನ್ ಆಂದೋಲನ್, ಯೂತ್ ಫಾರ್ ಸ್ವರಾಜ್, ಶಿಕ್ಷಣ್ ಸ್ವರಾಜ್, ಭ್ರಷ್ಟಾಚಾರ ವಿರೋಧಿ ಆಂದೋಲನ್, ಅಮ್ಮ ಸೌಹಾರ್ದ ಸಮಿತಿ ಅಸ್ತಿತ್ವ ಇತ್ಯಾದಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಅಂತಿಮವಾಗಿ ಅಭಿಯಾನವನ್ನು ಸ್ವರಾಜ್‌ಇಂಡಿಯಾ ಪಕ್ಷವಾಗಿ ಸ್ಥಾಪಿಸಿದ್ದಾರೆ ಎಂದು ದೇವನೂರರು ವಿವರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಗುರುಪ್ರಸಾದ್ ಕೆರಗೋಡು, ಸ್ವರಾಜ್ ಇಂಡಿಯಾ ರಾಜ್ಯ ಘಟಕದ ಮುಖ್ಯಸ್ಥ ದೊಡ್ಡಿಪಾಳ್ಯ ನರಸಿಂಹಮೂರ್ತಿ, ವಿ.ನಾಗರಾಜ್, ಪರಶುರಾಮೇಗೌಡ, ಕರುಣಾಕರಣ್, ಅಭಿರುಚಿ ಗಣೇಶ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸ್ವರಾಜ್‌ಇಂಡಿಯಾ ಪಕ್ಷವು ಮೊದಲು ನಡೆ, ಆಮೇಲೆ ನುಡಿ ಎಂಬ ಧ್ಯೇಯವನ್ನು ಅನುಸರಿಸುತ್ತಿದೆ. ಅದರ ಘೋಷಣಾ ವಾಕ್ಯ ರಾಜಕಾರಣಕ್ಕೆ ಹೊಸ ನಡಿಗೆ ಎಂಬುದೇ ವಿಶೇಷವಾಗಿದೆ.
 ಮಹಾ ಮೈತ್ರಿ ಜನಾಂದೋಲನದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿಯ ಎಲ್ಲ ಬಣಗಳ ನಡುವೆ ದ್ವೇಷ ಕಣ್ಮರೆಯಾಗಿದೆ. ಸ್ನೇಹ ಭಾವನೆ ಮೂಡಿದೆ. ಈಗಾಗಲೇ ಎರಡು ಬಣಗಳು ನಮ್ಮ ಜೊತೆ ಸೇರಲು ಸಹಮತ ವ್ಯಕ್ತಪಡಿಸಿವೆ. ಉಳಿದ ಬಣಗಳೊಂದಿಗೆ ಮಾತುಕತೆ ನಡೆದಿದೆ.
- ದೇವನೂರ ಮಹಾದೇವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News