ಮಾ.14ರಂದು ಕೃಷ್ಣ ಬಿಜೆಪಿ ಸೇರ್ಪಡೆ: ಯಡಿಯೂರಪ್ಪ
ಮೈಸೂರು, ಮಾ.13: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಾ.15ರಂದು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೃಷ್ಣ ಬಿಜೆಪಿ ಸೇರುವ ಸಂಧರ್ಭದಲ್ಲಿ ನಾನು ಕೂಡ ದೆಹಲಿಯಲ್ಲಿ ಇರುತ್ತೇನೆ. ಈ ಕಾರಣಕ್ಕಾಗಿಯೇ ಇಂದು ನಂಜನಗೂಡಿನಿಂದ ಬೆಂಗಳೂರಿಗೆ ತೆರಳುತ್ತಿದ್ದೇನೆ. ನಾಳೆ ದೆಹಲಿಗೆ ತೆರಳಿ ಕೃಷ್ಣರನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ ಎಂದರು.
ಕಳಲೆ ಕೇಶವಮೂರ್ತಿ ಹಾಗೂ ಶ್ರೀನಿವಾಸ್ ಪ್ರಸಾದ್ ನಡುವೆ ಪೈಪೋಟಿ ಇದೆ ಎನ್ನುವ ಮೂಲಕ ಸಿದ್ದರಾಮಯ್ಯ ಸೋಲೊಪ್ಪಿಕೊಂಡಿದ್ದಾರೆ. ರವಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಆ ಪಕ್ಷದ ಮುಖಂಡರು ಹತಾಶರಾಗಿ ಮಾತನಾಡಿದ್ದಾರೆ. ಸಿದ್ದರಾಮ್ಯನವರ ಮಂತ್ರಿಮಂಡಲದ ಸದಸ್ಯರೆಲ್ಲಾ ಬಂದು ಪ್ರಚಾರ ಮಾಡಿದರು ವಿ.ಶ್ರೀನಿವಾಸಪ್ರಸಾದ್ ಗೆಲುವು ಶತಸಿದ್ದ ಎಂದು ಹೇಳಿದರು.
ನಾನು ನಂಜನಗೂಡಿನಲ್ಲಿ ಪ್ರಚಾರ ಕೈಗೊಂಡ ವೇಳೆ ನಿರೀಕ್ಷೆಗೂ ಮೀರಿ ಜನ ಬೆಂಬಲ ನೀಡಿದ್ದಾರೆ. ಹೋದ ಕಡೆಯೆಲ್ಲ ಜನರು ನಮ್ಮನ್ನು ಸ್ವಾಗತಿಸಿರುವುದನ್ನು ನೋಡಿದರೆ ನಾನು ಬಂದಿದ್ದು ಪ್ರಚಾರಕ್ಕೋ ಅಥವಾ ವಿಜಯೋತ್ಸವಕ್ಕೋ ಎಂಬ ಭಾಸವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಯಡಿಯೂರಪ್ಪ ಮತ್ತು ಪ್ರಧಾನಿಯನ್ನು ಟೀಕೆ ಮಾಡುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಈ ಉಪಚುನಾವಣೆಯಲ್ಲಿ ನಾವು ಬಂದು ಪ್ರಚಾರ ಮಾಡುವ ಅಗತ್ಯವಿಲ್ಲ ಏಕೆಂದರೆ ಕಾಂಗ್ರೆಸ್ ಪಕ್ಷದವರೇ ನಮ್ಮನ್ನು ಕುರಿತು ಪ್ರಚಾರ ಮಾಡುತ್ತಿದ್ದಾರೆ ಎಂದು ಹಾಸ್ಯಭರಿತರಾದರು.
ಹತಾಶೆಯಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ಮುಖಂಡರು ಟೀಕೆ ಮಾಡುತ್ತಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರೋದು ನಾನೋ ಅಥವಾ ಸಿದ್ದರಾಮಯ್ಯನವರೋ ಎನ್ನುವುದು ಇದರಿಂದಲೇ ಗೊತ್ತಾಗಲಿದೆ ಎಂದರು. ಸಿ.ಎಂ.ಇಬ್ರಾಹಿಂ ಹೇಳಿಕೆ ಕುರಿತು ಪ್ರಶ್ನಿಸಿದಾಗ ಅಂತಹವರ ಹೇಳಿಕೆಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಮೈಸೂರಿನ ನಟರಾಜ ಕಾಲೇಜು ಬಳಿ ಇರುವ ಶಂಕರ ಮಠಕ್ಕೆ ತೆರಳಿ ಮೈಸೂರು ನಗರಕ್ಕೆ ಆಗಮಿಸಿರುವ ಶೃಂಗೇರಿ ಮಠದ ಭಾರತೀ ತೀರ್ಥ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡರು.