ಮದ್ಯಕ್ಕಾಗಿ ಹೆಂಡತಿಯನ್ನೇ ಕೊಲೆ ಮಾಡಿದ ಗಂಡ !
ಸಿದ್ದಾಪುರ, ಮಾ.14: ಕುಡಿತದ ವಿಚಾರವಾಗಿ ಪತ್ನಿ ಮತ್ತು ಪತಿ ನಡುವೆ ಕಲಹ ಏರ್ಪಟ್ಟು ಪತ್ನಿಯನ್ನು ಕೊಲೆಗೈದ ಘಟನೆ ಸಮೀಪದ ಕಣ್ಣಂಗಾಲ ಗ್ರಾಪಂ ವ್ಯಾಪ್ತಿಯ ಪಳ್ಳಕರೆ ಕಾಫಿ ತೋಟದ ಲೈನ್ ಮನೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಮುಲಿಯಾಸ್ ಮುಂಡ (40) ಎಂಬಾತ ತನ್ನ ಪತ್ನಿ ಬೀನಾ (30) ಎಂಬಾಕೆಯನ್ನು ಕೊಲೆಗೈದು ಪೊಲೀಸರ ಅತಿಥಿಯಾಗಿದ್ದಾನೆ.
ಒಂದು ಬಾಟಲಿ ಮದ್ಯಕ್ಕಾಗಿ ಗಂಡ ಹೆಂಡತಿ ಇಬ್ಬರ ನಡುವೆ ಕಲಹ ಏರ್ಪಟ್ಟು, ಕುಪಿತಗೊಂಡ ಪತಿ ತನ್ನ ಪತ್ನಿಯನ್ನು ದೊಣ್ಣೆಯಿಂದ ತಲೆಯ ಭಾಗಕ್ಕೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ತೀವೃವಾಗಿ ಅಸ್ವಸ್ಥಗೊಂಡ ಬೀನಾ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಮಂಗಳವಾರ ಬೆಳಗ್ಗೆ ಸಮೀಪದ ನಿವಾಸಿಗಳಿಗೆ ವಿಷಯ ತಿಳಿದು ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಠಾಣಾಧಿಕಾರಿ ಸುಬ್ರಮಣಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಆರೋಪಿ ಪರಾರಿಯಾಗಿದ್ದನು.
ವಿಷಯ ತಿಳಿದು ಕೂಡಲೇ ಕಾರ್ಯಪ್ರವೃತ್ತ ಪೊಲೀಸರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.