ಕೌಟುಂಬಿಕ ಕಲಹ: ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಶಿಕ್ಷಕಿ
ಬಾಗೇಪಲ್ಲಿ, ಮಾ.15: ಕೌಟುಂಬಿಕ ಕಲಹದಲ್ಲಿ ಪತ್ನಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ತಾಲೂಕಿನ ಗೂಳೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಗೂಳೂರು ಹೋಬಳಿ ಬೊಮ್ಮಯ್ಯಗಾರಿಪಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಶಿಕಲಾ(24) ಅವರು ಗೂಳೂರು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಗಂಡ ಶ್ರೀನಿವಾಸ ಜತೆ ವಾಸವಾದ್ದರು. ರಾತ್ರಿ 11 ಗಂಟೆ ಸಮಯದಲ್ಲಿ ಮೊಬೈಲ್‌ನಲ್ಲಿ ಗಂಡನ ಜತೆ ಮಾತಿನ ಚಕಮುಕಿ ನಡೆದಿದೆ ಎನ್ನಲಾಗಿದೆ.
ಮಿಟ್ಟೇಮರಿ ರಥೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಮನೆಗೆ ಬಂದ ತಕ್ಷಣ ಮತ್ತಷ್ಟು ಜಗಳ ನಡೆದು ಶಿಕ್ಷಕಿ ಸ್ನಾನದ ಗೃಹಕ್ಕೆ ಹೋಗಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಳು. ತಕ್ಷಣ ಗಂಡ ಪತ್ನಿಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಪ್ರಕರಣದಲ್ಲಿ ಶಿಕ್ಷಕಿಗೆ ದೇಹದ ಎಡಭಾಗ ಭಾಗಶಃ ಸುಟ್ಟು ಹೋಗಿದೆ.