ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಮೇಲೆ ಹಲ್ಲೆ
ಶಿಡ್ಲಘಟ್ಟ,ಮಾ.14: ಹಳೆ ದ್ವೇಷದ ಹಿನ್ನಲೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಗುಂಪೊಂದು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಮೇಲೆ ಮಂಗಳವಾರ ಹಲ್ಲೆ ನಡೆಸಿದ್ದಾರೆ.
ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಲಸೇನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಮಂಜುಳ ಹಾಗೂ ಸಹಾಯಕಿ ರಾಮಲಕ್ಷ್ಮಮ್ಮ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ವಲಸೇನಹಳ್ಳಿಯ ತಮ್ಮರೆಡ್ಡಿ, ಮದುಸೂಧನ್, ವೆಂಕಟೇಶ್, ಯಾಮಕ್ಕ, ರತ್ನಮ್ಮ, ಶೋಭ, ಪ್ರೀತಿ ಇನ್ನಿತರೆ ಹತ್ತು ಮಂದಿಗೂ ಹೆಚ್ಚು ಅಂಗನವಾಡಿ ಕೇಂದ್ರಕ್ಕೆ ಏಕಾ ಏಕಿ ನುಗ್ಗಿ ಮಕ್ಕಳನ್ನು ಹೊರಗೆ ಕಳುಹಿಸಿದ್ದಾರೆ. ಇದನ್ನು ಪ್ರಶ್ನಿಸಿದ ಅಂಗನವಾಡಿ ಕಾರ್ಯಕರ್ತೆ ಮಂಜುಳ ಹಾಗೂ ಸಹಾಯಕಿ ರಾಮಲಕ್ಷ್ಮಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.
‘ನನ್ನನ್ನು ವಲಸೇನಹಳ್ಳಿ ಅಂಗನವಾಡಿ ಕೆಂದ್ರದಿಂದ ವರ್ಗಾವಣೆ ಮಾಡಲು ಈ ಗುಂಪು ಕಳೆದ ಹಲವು ದಿನಗಳಿಂದಲೂ ಪ್ರಯತ್ನ ಮಾಡುತ್ತಿದ್ದಾರೆ. ಅದು ಫಲ ನೀಡದಿದ್ದಾಗ ಹತಾಶೆಗೊಂಡ ಆವರು ಹೀಗೆ ಕೇಂದ್ರಕ್ಕೆ ನುಗ್ಗಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಅಂಗನವಾಡಿ ಕಾರ್ಯಕರ್ತೆ ಮಂಜುಳ ಪೊಲೀಸರಿಗೆ ದೂರು ನೀಡಿದ್ದಾಳೆ.
ಶಿಶು ಅಭಿವೃದ್ದಿ ಯೋಜನಾಕಾರಿಗಳಿಗೂ ಈ ಬಗ್ಗೆ ದೂರನ್ನು ನೀಡಿ ನನ್ನ ಹಾಗೂ ಸಹಾಯಕಿ ಮೇಲೆ ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಜರಿಗಿಸಬೇಕು ಮತ್ತು ನನಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.