×
Ad

ನಾಳೆ ಬಜೆಟ್ ಮಂಡನೆ: ರೈತರ ಸಾಲಮನ್ನಾ ನಿರೀಕ್ಷೆ

Update: 2017-03-14 20:39 IST

ಬೆಂಗಳೂರು, ಮಾ. 14: ಹಣಕಾಸು ಖಾತೆಯ ಹೊಣೆಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಳೆ(ಮಾ.15) ಬೆಳಗ್ಗೆ 11:30ಕ್ಕೆ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ 2017-18ನೆ ಸಾಲಿನ ಮಹತ್ವದ ಬಜೆಟ್ ಮಂಡಿಸಲಿದ್ದು, ರೈತರ ಸಾಲಮನ್ನಾ ಮಾಡುವ ನಿರೀಕ್ಷೆಯಿದೆ.

ಪಂಚರಾಜ್ಯಗಳ ಚುನಾವಣೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿರುವ ಸಿಎಂ ಸಿದ್ದರಾಮಯ್ಯ ದಾಖಲೆಯ 12ನೆ ಬಜೆಟ್ ಮಂಡಿಸುತ್ತಿದ್ದು, ನಿರೀಕ್ಷೆಯಂತೆ ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ದಲಿತ (ಅಹಿಂದ) ವರ್ಗಗಳಿಗೆ ಭರಪೂರ ಕೊಡುಗೆಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ.

ರಾಜ್ಯದ 176 ತಾಲೂಕುಗಳ ಪೈಕಿ 160 ತಾಲೂಕುಗಳು ಭೀಕರ ಸ್ವರೂಪದ ಬರಕ್ಕೆ ತುತ್ತಾಗಿವೆ. ಹೀಗಾಗಿ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರ ಬ್ಯಾಂಕುಗಳ ಮೂಲಕ ರೈತರು ಪಡೆದಿರುವ ಶೇ.50ರಷ್ಟು ‘ಸಾಲಮನ್ನಾ ಘೋಷಣೆ’ ಮಾಡಲಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.

ಜನಪರ-ಜನಪ್ರಿಯ: ಮುಂದಿನ ವರ್ಷ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ‘ಜನಪರ-ಜನಪ್ರಿಯ’ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಲಿದ್ದಾರೆ. ಅಲ್ಲದೆ, ಪಡಿತರ ಚೀಟಿದಾರರಿಗೆ 10ಕೆ.ಜಿ.ಉಚಿತ ಅಕ್ಕಿ, ಎಸ್ಸಿ-ಎಸ್ಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಕೆ ಘೋಷಣೆ ಮಾಡಲಿದ್ದಾರೆಂದು ಗೊತ್ತಾಗಿದೆ.

ವಿಧವೆಯರು, ಹಿರಿಯ ನಾಗರಿಕರು, ಲೈಂಗಿಕ ಅಲ್ಪಸಂಖ್ಯಾತರು, ಅಶಕ್ತರು, ನಿರ್ಗತಿಕರು, ಮತೀಯ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು, ಶೋಷಿತರು ಸೇರಿ ಎಲ್ಲ ವರ್ಗದವರಿಗೆ ಬಜೆಟ್‌ನಲ್ಲಿ ಭರಪೂರ ಯೋಜನೆಗಳನ್ನು ಪ್ರಟಿಸುವ ಅನಿವಾರ್ಯ ‘ಸವಾಲು’ ಸಿದ್ದರಾಮಯ್ಯ ಮುಂದಿದೆ.

ಗಾತ್ರ ಹೆಚ್ಚಳ: ಕಳೆದ ಸಾಲಿನಲ್ಲಿ 1.62 ಲಕ್ಷ ಕೋಟಿ ರೂ.ಮೊತ್ತದ ಆಯವ್ಯಯ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, 2018ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಜನಪ್ರಿಯ ಯೋಜನೆಗಳ ಘೋಷಣೆ ಹಿನ್ನೆಲೆಯಲ್ಲಿ ಬಜೆಟ್‌ನ ಗಾತ್ರ 2ಲಕ್ಷ ಕೋಟಿ ರೂ.ಗಳು ದಾಟುವ ಸಾಧ್ಯತೆಗಳಿವೆ.

‘ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಲಾಗುತ್ತಿದೆ’ ಎಂದು ವಿಪಕ್ಷ ನಾಯಕರಾಗಿರುವ ವೇಳೆ ಆರೋಪ ಮಾಡುತ್ತಿದ್ದ ಸಿದ್ದರಾಮಯ್ಯ, ಇದೀಗ ತಮ್ಮ ಜನಪ್ರಿಯ ‘ಭಾಗ್ಯಗಳ’ ಸರಣಿ ಯೋಜನೆಗಳ ಜಾರಿಗೆ ಸಾಲ ಮಾಡುತ್ತಿದ್ದಾರೆ. ಈ ನಡುವೆ ಬಜೆಟ್‌ನ ಗಾತ್ರದ ಹೆಚ್ಚಳಕ್ಕೆ ಆರ್ಥಿಕ ತಜ್ಞರಿಂದ ಆಕ್ಷೇಪ ವ್ಯಕ್ತವಾಗಿದೆ.

ಈ ಮಧ್ಯೆಯೇ ಪ್ರಧಾನಿ ಮೋದಿ ಹಾಗೂ ಬಿಜೆಪಿ ‘ಅಲೆ’ಯ ಅಶ್ವಮೇಧದ ಕುದುರೆಯನ್ನು ಹಿಡಿದು ನಿಲ್ಲಿಸುವ ಒತ್ತಡದಲ್ಲಿ ಸಿದ್ದರಾಮಯ್ಯ, ನಗರ-ಗ್ರಾಮೀಣ ಪ್ರದೇಶವನ್ನು ಸಮದೂಗಿಸಬೇಕಿದೆ. ಅಲ್ಲದೆ, ಯುವ ಜನರನ್ನು ಸೆಳೆಯಲು ಹಲವು ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ.

2018ರ ಮೇ ವೇಳೆಗೆ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, 2018-19ನೆ ಸಾಲಿನ ಆಯವ್ಯಯ ಕೇವಲ ಲೇಖಾನುದಾನಕ್ಕೆ ಸೀಮಿತಗೊಳ್ಳಲಿದೆ. ಆ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮುಂಬರುವ ಚುನಾವಣೆ ಕೇಂದ್ರೀಕರಿಸುವ ಆಯವ್ಯಯ ಆಗಲಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುವ ಮೊದಲು ನೀಡಿದ್ದ 165 ಆಶ್ವಾಸನೆಗಳ ಪೈಕಿ ಈಗಾಗಲೇ 125 ಭರವಸೆಗಳನ್ನು ಈಡೇರಿಸಿದ್ದು, ಉಳಿದ 40 ಭರವಸೆಗಳನ್ನು ಪ್ರಸಕ್ತ ಆಯವ್ಯಯದಲ್ಲಿ ಈಡೇರಿಸಬೇಕಿದೆ. ಅಹಿಂದ ವರ್ಗಗಳಿಗೆ ಬಜೆಟ್ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಪ್ರಯತ್ನಿಸುವ ಸಾಧ್ಯತೆಗಳಿದ್ದು ರಾಜ್ಯದ ಜನತೆಯ ಚಿತ್ತ ಈ ಮಹತ್ವದ ಬಜೆಟ್‌ನತ್ತ ನೆಟ್ಟಿದೆ.

ಸಿದ್ದರಾಮಯ್ಯ ಈ ಹಿಂದೆ ಮಂಡಿಸಿರುವ ಬಜೆಟ್‌ಗಳಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಆದ್ಯತೆ ನೀಡಿದ್ದರು. ಈ ಬಾರಿ ನೀರಾವರಿ, ಕೃಷಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಸಹಕಾರ ಇಲಾಖೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ರೈತರು, ಮಹಿಳೆಯರು, ಯುವಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.

2018ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯು ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಸವಾಲಾಗಿದ್ದು, ರಾಜ್ಯದಲ್ಲಿ ಶತಾಯ ಗತಾಯ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈ ಬಜೆಟ್ ಪ್ರಮುಖ ಅಸ್ತ್ರವಾಗಲಿದೆ. ಈ ಬಜೆಟ್‌ನಲ್ಲಿ ಘೋಷಿಸಲ್ಪಡುವ ಭರವಸೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಚಿವ ಸಂಪುಟದ ಎಲ್ಲ ಸದಸ್ಯರು ಶ್ರಮಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.


‘ಪ್ರಧಾನಿ ಮೋದಿ ಹಾಗೂ ಬಿಜೆಪಿ ‘ಅಲೆ’ಯ ಅಶ್ವಮೇಧದ ಕುದುರೆಯನ್ನು ಹಿಡಿದು ನಿಲ್ಲಿಸುವ ಒತ್ತಡ, ನಗರ-ಗ್ರಾಮೀಣ ಪ್ರದೇಶವನ್ನು ಸಮದೂಗಿಸುವ ಸವಾಲು. ಜತೆಗೆ ‘ಅಹಿಂದ’ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಬೇಕಿದೆ. ಅಲ್ಲದೆ, ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಸಕ್ತ ಬಜೆಟ್ ನಿರೀಕ್ಷೆ ಹುಟ್ಟಿಸಿದೆ’

ಸಚಿವರು-ಶಾಸಕರ ಹಾಜರಾತಿ ಕಡ್ಡಾಯಕ್ಕೆ ಕ್ರಮ:ಸ್ಪೀಕರ್ ಕೋಳಿವಾಡ

ಬೆಂಗಳೂರು, ಮಾ. 14: ಅಧಿವೇಶನ ಕಲಾಪದ ಸಂದರ್ಭದಲ್ಲಿ ಸಚಿವರು ಮತ್ತು ಶಾಸಕರ ಗೈರು ಹಾಜರಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಲಾಪ ನಡೆಯುವ ಸಂದರ್ಭದಲ್ಲಿ ಸಚಿವರು ಹಾಗೂ ಶಾಸಕರ ಆಯಾ ದಿನದ ಹಾಜರಾತಿಯ ಬಗ್ಗೆ ಪ್ರತಿನಿತ್ಯ ಮಾಧ್ಯಮಗಳಿಗೆ ವಿವರಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.

ಸದನದಲ್ಲಿ ಸಚಿವರು-ಶಾಸಕರುಗಳು ಎಷ್ಟು ಗಂಟೆಗಳ ಕಾಲ ಹಾಜರಿದ್ದರು, ಯಾವ ಕಲಾಪದಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿಯನ್ನು ಮಾಧ್ಯಮಗಳಿಗೆ ಒದಗಿಸುವ ತೀರ್ಮಾನ ಮಾಡಲಾಗಿದೆ. ಆ ಮೂಲಕ ಸಚಿವರು ಹಾಗೂ ಶಾಸಕರ ಸದನದಲ್ಲಿ ಎಷ್ಟು ಹೊತ್ತು ಇದ್ದರು ಎಂಬುದನ್ನು ಸಾರ್ವಜನಿಕರ ಗಮನಕ್ಕೆ ತರಲಾಗುವುದು ಎಂದರು.

ಕಲಾಪದಲ್ಲಿ ಸದಸ್ಯರ ಹಾಜರಾತಿ ಹೆಚ್ಚುವ ದೃಷ್ಟಿಯಿಂದ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡೂ ಬಾರಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುವುದು ಕಡ್ಡಾಯ ಎಂದ ಅವರು, ಶಾಸಕರ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸುವ ಪ್ರಸ್ತಾವವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ವಿಧಾನಸಭೆ ಕಲಾಪವನ್ನು ಪರಿಣಾಮಕಾರಿ ಮತ್ತು ಅರ್ಥಪೂರ್ಣವಾಗಿ ನಡೆಸುವ ದೃಷ್ಟಿಯಿಂದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಹಾಜರಿರಬೇಕು ಎಂದು ಅಪೇಕ್ಷೆಪಟ್ಟ ಅವರು, ಸದನ ಸಮಿತಿ ನಡಾವಳಿಗಳ ವರದಿ ಮಾಡಲು ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಸಿಎಂ ಬಜೆಟ್ ಮಂಡನೆ: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.15ರ ಬೆಳಗ್ಗೆ 11:30ಕ್ಕೆ ವಿಧಾನ ಮಂಡಲದಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದಾರೆಂದು ಸ್ಪೀಕರ್ ಕೆ.ಬಿ. ಕೋಳಿವಾಡ ತಿಳಿಸಿದರು.

ಮಾ.15ರಿಂದ 28ರ ವರೆಗೆ 9 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪ, ಆಯವ್ಯಯದ ಮೇಲಿನ ಚರ್ಚೆ ಹಾಗೂ ಬಜೆಟ್ ಅಂಗೀಕಾರ ಕಲಾಪ ಜರುಗಲಿದೆ ಎಂದ ಅವರು, ಸುಮಾರು 2215 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 90 ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಸದನದಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಸಚಿವರು ಉತ್ತರಿಸಲಿದ್ದಾರೆ. 25 ಗಮನ ಸೆಳೆಯುವ ಸೂಚನೆಗಳು ಬಂದಿವೆ. ನಿಯಮ 351ರಡಿ 40 ಸೂಚನೆಗಳು ಹಾಗೂ ಒಂದು ಖಾಸಗಿ ನಿರ್ಣಯವನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ಅಧಿವೇಶನದಲ್ಲಿ ಮಂಡನೆಯಾಗಿರುವ ನಾಲ್ಕು ವಿಧೇಯಕಗಳು ಪರ್ಯಾಲೋಚನೆ ಹಾಗೂ ಅಂಗೀಕಾರ ಪಡೆಯಬೇಕಾಗಿದೆ ಎಂದು ಅವರು, ಬಜೆಟ್ ಅಂಗೀಕಾರದ ನಂತರ ವಿಷಯವಾರು ಚರ್ಚೆ ನಡೆದು ಪೂರ್ಣಪ್ರಮಾಣದ ಬಜೆಟ್‌ಗೆ ಸದನದಲ್ಲಿ ಜುಲೈನಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದರು.

 ವರ್ಷದಲ್ಲಿ 60ದಿನಗಳ ಕಾಲ ಅಧಿವೇಶನ ನಡೆಸಬೇಕೆಂದು ನಿಯಮಾವಳಿ ಅಂಗೀಕರಿಸಲಾಗಿದೆ.ಆ ನಿಟ್ಟಿನಲ್ಲಿ ಸರಕಾರವೂ ಇದಕ್ಕೆ ಸಹಕಾರ ನೀಡಬೇಕು ಎಂದ ಅವರು, ಶಾಸನ ರಚನೆ ವಿಷಯಗಳಲ್ಲಿ ಸದನದಲ್ಲಿ ವಿಸ್ತೃತ ಚರ್ಚೆ ಆಗಬೇಕು. ತರಾತುರಿ ಶಾಸನ ಅನುಮೋದನೆಗೆ ಅವಕಾಶ ಮಾಡಿಕೊಡಬಾರದೆಂದು ಸರಕಾರಕ್ಕೆ ಸಲಹೆ ನೀಡಲಾಗಿದೆ ಎಂದು ಕೋಳಿವಾಡ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ವಿಧಾನಸೌಧ ಸುತ್ತ ನಿಷೇದಾಜ್ಞೆ

ಬೆಂಗಳೂರು, ಮಾ.14: ಇಂದಿನಿಂದ ಮಾ.28ವರೆಗೂ ಬಜೆಟ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಕಟ್ಟಡದ ಸುತ್ತಲೂ 2 ಕಿ.ಮೀಟರ್ ವ್ಯಾಪ್ತಿಯ ಪ್ರದೇಶಕ್ಕೆ ಅನ್ವಯಿಸುವಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್ ತಿಳಿಸಿದ್ದಾರೆ.

ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕಲಂ 144ನೆ ಅಡಿ ನಿಷೇಧಾಜ್ಞೆ ಹೊರಡಿಸಲಾಗಿದ್ದು, ವಿಧಾನಸೌಧದ 2 ಕಿ.ಮೀಟರ್ ವ್ಯಾಪ್ತಿ 5 ಜನಕ್ಕೂ ಹೆಚ್ಚು ಗುಂಪು ಸೇರುವುದು, ಮೆರವಣಿಗೆ ಸಭೆ ನಡೆಸುವುದು, ಶಸ್ತ್ರಗಳನ್ನು ಹಾಗೂ ಮಾರಕಾಸ್ತ್ರಗಳನ್ನು ಇಟ್ಟುಕೊಳ್ಳುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಅದೇ ರೀತಿ, ವ್ಯಕ್ತಿಗಳ ಶವಗಳ ಪ್ರತಿಕೃತಿಗಳ ಪ್ರದರ್ಶನ, ಪ್ರಚೋದನೆಯ ಘೋಷಣೆಗಳನ್ನು ಕೂಗುವುದನ್ನು ನಿಷೇಧಿಸಲಾಗಿದೆ ಎಂದು ಪ್ರವೀಣ್ ಸೂದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News