×
Ad

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಸಿಬಿ ಕ್ಲೀನ್ ಚಿಟ್

Update: 2017-03-14 22:01 IST

ಬೆಂಗಳೂರು, ಮಾ.14: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ಹ್ಯೋಬ್ಲೋಟ್ ವಾಚ್ ದೂರಿಗೆ ಸಂಬಂಧಪಟ್ಟಂತೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕ್ಲೀನ್‌ಚಿಟ್ ನೀಡಿದೆ.

ಹ್ಯೋಬ್ಲೋಟ್ ವಾಚ್‌ನ್ನು ಸಿದ್ದರಾಮಯ್ಯ ಅವರಿಗೆ ತಾವೇ ನೀಡಿರುವುದಾಗಿ ಅವರ ಸ್ನೇಹಿತ ದುಬೈ ಮೂಲದ ಡಾ.ಗಿರೀಶ್‌ಚಂದ್ರ ಶರ್ಮ ಎಸಿಬಿ ಮುಂದೆ ಹೇಳಿಕೆ ಕೊಟ್ಟಿರುವುದರಿಂದ ಈ ಪ್ರಕರಣವನ್ನು ಇತ್ಯರ್ಥಗೊಳಿಸಿದೆ.

ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಬೇಕೆಂದು ಈ ಹಿಂದೆ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಸಾಮಾಜಿಕ ಕಾರ್ಯಕರ್ತ ನಟರಾಜ ಶರ್ಮ ಎಂಬುವರು ದೂರು ನೀಡಿದ್ದರು. ರಾಜ್ಯಪಾಲರು ಇದನ್ನು ತಿರಸ್ಕರಿಸಿದ್ದರು.

ಬಳಿಕ ನಟರಾಜ ಶರ್ಮ, ವಕೀಲ ಟಿ.ಜೆ.ಅಬ್ರಹಾಂ, ಆರ್‌ಟಿಇ ಕಾರ್ಯಕರ್ತ ರಾಮಮೂರ್ತಿಗೌಡ ಎಂಬುವರು ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ದಾಖಲಿಸಿದ್ದರು.

ತನಿಖೆ ನಡೆಸಿರುವ ಎಸಿಬಿ ದುಬೈ ವೈದ್ಯ ಡಾ.ಗಿರೀಶ್‌ಚಂದ್ರ ವರ್ಮ ಅವರು 70 ಲಕ್ಷ ರೂ.ಬೆಲೆಬಾಳುವ ಹ್ಯೋಬ್ಲೋಟ್ ವಾಚ್‌ನ್ನು ಮುಖ್ಯಮಂತ್ರಿಗಳಿಗೆ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿ ಈ ವಾಚು ಪಡೆದಿರುವುದಕ್ಕೆ ಸಾಕ್ಷಾಧಾರಗಳು ಲಭ್ಯವಿಲ್ಲ. ಸ್ನೇಹಿತರೇ ಒತ್ತಾಯಪೂರ್ವಕವಾಗಿ ಉಡುಗೊರೆಯಾಗಿ ನೀಡಿರುವುದು ಕಾನೂನಿನ ಪ್ರಕಾರ ಅಪರಾಧವಲ್ಲ. ಹೀಗಾಗಿ, ಈ ಪ್ರಕರಣವನ್ನು ಇತ್ಯರ್ಥಗೊಳಿಸುತ್ತಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಈ ಪ್ರಕರಣವನ್ನು ಮೊದಲ ಬಾರಿಗೆ ಬಯಲಿಗೆಳೆದಿದ್ದರು. ಆರಂಭದಲ್ಲಿ ಸಿದ್ದರಾಮಯ್ಯ ಇದನ್ನು ನಿರಾಕರಿಸಿದ್ದರು. ನನ್ನ ಬಳಿ ಇರುವುದು ಕೇವಲ 5 ಲಕ್ಷ ರೂ.ವೌಲ್ಯದ ವಾಚು ಎಂದು ವಾದಿಸಿದ್ದರು. ಬಳಿಕ ಕುಮಾರಸ್ವಾಮಿ ದಾಖಲೆಗಳ ಸಮೇತ ಇದು 70 ಲಕ್ಷ ರೂ.ಬೆಲೆಬಾಳುವ ಹ್ಯೋಬ್ಲೋಟ್ ವಾಚ್ ಎಂಬುದನ್ನು ಹೇಳಿದಾಗ ಸ್ವತಃ ಸಿದ್ದರಾಮಯ್ಯ ಅವರೆ ಮುಜುಗುರಕ್ಕೆ ಒಳಗಾಗಿದ್ದರು.

ಪ್ರತಿಪಕ್ಷ ಬಿಜೆಪಿ ಅಧಿವೇಶನದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿತ್ತು. ಬಳಿಕ ಸಿದ್ದರಾಮಯ್ಯ ಅವರೆ ವಾಚನ್ನು ವಿಧಾನಸೌಧದಲ್ಲಿರುವ ವೀಕ್ಷಕರ ಗ್ಯಾಲರಿಗೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News