ಭಾವನಾತ್ಮಕ ವಿಚಾರ ಕೆದಕಿ ಬಿಜೆಪಿಯಿಂದ ರಾಜಕೀಯ: ಗುಂಡೂರಾವ್
ತೀರ್ಥಹಳ್ಳಿ, ಮಾ.14: ಭಾವನಾತ್ಮಕ ವಿಚಾರಗಳನ್ನು ಕೆದಕುತ್ತ ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಬಿಜೆಪಿ ಮತ್ತು ಆರೆಸ್ಸೆಸ್ ಸಮಾಜವನ್ನು ಒಡೆಯುವ ಮೂಲಕ ರಾಜಕೀಯ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪಟ್ಟಣದ ಸಂಸ್ಕೃತಿ ಮಂದಿರದ ಗೋಪಾಲಗೌಡ ವೇದಿಕೆಯಲ್ಲಿ ನಡೆದ ಶಾಂತವೇರಿ ಗೋಪಾಲಗೌಡರ ಜನ್ಮ ದಿನಾಚರಣೆಯ ಅಂಗವಾಗಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಜನಜಾಗೃತಿ ಪಾದಯಾತ್ರೆ ಹಾಗೂ ಬೃಹತ್ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೈತಿಕತೆ ಕಳೆದುಕೊಂಡ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ಗೊಂದಲ ಸೃಷ್ಟಿ ಮಾಡುವುದೇ ತನ್ನ ಸಾಧನೆಯನ್ನಾಗಿಸಿದೆ ಎಂದು ಆರೋಪಿಸಿದರು.
ಯಡಿಯೂರಪ್ಪನವರಿಗೆ ನೈತಿಕತೆ ಇದ್ದರೆ ಉದ್ಯಮಿಯೊಬ್ಬರಿಂದ ಪಡೆದ 40 ಕೋಟಿ ರೂ. ಹಣದ ಬಗ್ಗೆ ಉತ್ತರಿಸಲಿ. ಸ್ಟೀಲ್ ಬ್ರಿಡ್ಜ್ ಬಗ್ಗೆ ಅಪಪ್ರಚಾರ ಮಾಡುವ ಬಿಜೆಪಿಯವರು ಮೊದಲು ದಾಖಲೆ ತೋರಿಸಲಿ. ಸಿದ್ದರಾಮಯ್ಯನವರ ವಾಚ್‌ನ ಬಗ್ಗೆ ಪ್ರಶ್ನಿಸುವ ಬಿಜೆಪಿಯವರು ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮಂತ್ರಿಗಳು, ಮುಖಂಡರು ಯಾವ ಸಾಧನೆ ಮಾಡಿದ್ದರು ಎಂಬುದನ್ನು ಒಮ್ಮೆ ಯೋಚಿಸಲಿ ಎಂದರು.
ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಜನರ ಮರಣ ಶಾಸನ ಬರೆಯಲು ಹೊರಟಿರುವ ಕೇಂದ್ರ ಸರಕಾರದ ನೀತಿ ದುರದೃಷ್ಟಕರ. ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುವ ಬಿಜೆಪಿಯವರಿಗೆ ರೈತಪರ ಕಾಳಜಿ ಇರಬೇಕಾಗಿತ್ತು. ದೇಶದಲ್ಲಿ ನಿರುದ್ಯೋಗ ಸೃಷ್ಟಿ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಂಡವಾಳಶಾಹಿಗಳ ಸರಕಾರ ಎಂದು ಕುಟುಕಿದರು.
ಕೇಂದ್ರ ಸರಾರ ಆದೇಶ ಹೊರಡಿಸಿರುವ ಕಸ್ತೂರಿರಂಗನ್ ವರದಿಯಿಂದ ಮಲೆನಾಡಿನ ಶೇ.90ರಷ್ಟು ಭಾಗಗಳು ಅತಂತ್ರ ಸ್ಥಿತಿ ತಲುಪಲಿವೆ. ಈ ಬಗ್ಗೆ ಹಿಂದೆಯೇ ಜಿ.ಪಂ. ಹಾಗೂ ಕೆ.ಡಿ.ಪಿ ಸಭೆಗಳಲ್ಲೂ ನಿರ್ಣಯ ಕೈಗೊಂಡು ತಿರಸ್ಕರಿಸಿದ್ದೆವು. ಆದರೆ, ಈ ನಾಡಿನ ಪರಿಸರ ವಾದಿಗಳು ಕಸ್ತೂರಿ ರಂಗನ್ ವರದಿಯ ಬಗ್ಗೆ ಮಾತನಾಡುವುದನ್ನು ಗಮನಿಸಿದರೆ ಆಶ್ಚರ್ಯವೆನಿಸುತ್ತದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಂ. ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಕಾಡ ಅಧ್ಯಕ್ಷ ಸುಂದರೇಶ್, ಮಾಜಿ ಶಾಸಕ ಕಡಿದಾಳು ದಿವಾಕರ್, ರಾಜ್ಯ ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮೀಗಾ, ಹಾಪ್ ್ಸಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಎಸ್ಸಿ ಅಧ್ಯಕ್ಷೆ ಜಿ.ಪಲ್ಲವಿ, ಮಾಜಿ ಶಾಸಕ ಎಚ್. ಎಂ. ಚಂದ್ರಶೇಖರಪ್ಪ, ಎಪಿಎಂಸಿ ಅಧ್ಯಕ್ಷ ಕೇಳೂರು ಮಿತ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಕೆಪಿಸಿಸಿ ಸದಸ್ಯ ನಾರಾಯಣರಾವ್, ಮುಖಂಡರಾದ ಪಟಮಕ್ಕಿ ಮಹಾಬಲೇಶ್, ಸುಂದರೇಶ್, ಪಡುವಳ್ಳಿ ಹರ್ಷೇಂದ್ರ ಕುಮಾರ್, ವಿಲಿಯಂ, ಜಿ.ಪಂ. ಸದಸ್ಯೆ ಕಲ್ಪನಾ ಪದ್ಮನಾಭ, ಶ್ವೇತಾ ಬಂಡಿ, ಬಿಪಿ ರಾಮಚಂದ್ರ, ವಾಸಪ್ಪ, ಎಪಿಎಂಸಿ ಉಪಾಧ್ಯಕ್ಷೆ ಮೈಥಿಲಿ ಸತೀಶ್ ಮುಂತಾದವರಿದ್ದರು.
ಕಸ್ತೂರಿರಂಗನ್ ವರದಿಯ ಬಗ್ಗೆ ಬಿಜೆಪಿ ವೌನವೇಕೆ : ಖಾದರ್
ತೀರ್ಥಹಳ್ಳಿ, ಮಾ.14: ಕಸ್ತೂರಿ ರಂಗನ್ ವರದಿಯನ್ನಾಧರಿಸಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶದಿಂದ ಮಲೆನಾಡಿಗರ ಸ್ಥಿತಿ ಆತಂಕಗೊಂಡಿದೆ. ಈ ವಿಚಾರದ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಮತ್ತು ಕೇಂದ್ರ ಸರಕಾರದಲ್ಲಿ ಮಂತ್ರಿಯಾಗಿರುವ ಮೂರು ಸಚಿವರು ಯಾಕೆ ಮಾತನಾಡುತ್ತಿಲ್ಲ ಎಂಬುದನ್ನು ಬಹಿರಂಗಪಡಿಸಲಿ. ಈ ವಿಚಾರದಲ್ಲಿ ಕೇಂದ್ರ ಸರಕಾರ ರಾಜಕೀಯ ರಹಿತವಾಗಿ ಸ್ವೀಕರಿಸಬೇಕಾಗಿತ್ತು ಎಂದು ರಾಜ್ಯ ಆಹಾರ ಖಾತೆ ಸಚಿವ ಯು. ಟಿ. ಖಾದರ್ ಹೇಳಿದರು.
ಪಟ್ಟಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಈಗಾಗಲೇ ರಾಜ್ಯ ಸರಕಾರ ಹಿರಿಯ ಮಂತ್ರಿಗಳ ಸಮಿತಿಯನ್ನು ರಚಿಸಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಭೇಟಿ ನೀಡಿ ವಿವರ ಹಾಗೂ ವರದಿಯನ್ನು ಸಂಗ್ರಹಿಸಿ ಕೇಂದ್ರ ಸರಕಾರಕ್ಕೆ ನೀಡಿದೆ. ಆದರೆ, ಬಿಜೆಪಿಯವರು ಈ ವಿಚಾರದಲ್ಲಿ ವೌನ ವಹಿಸಿ ರಾಜ್ಯ ಸರಕಾರದ ವಿರುದ್ಧ ಅಪಪ್ರಚಾರ ಮಾಡಿಕೊಂಡು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಗ್ಗೆ ಪಕ್ಷದ ಬಲ ಕುಗ್ಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದಲ್ಲಿ ಅಧಿಕಾರ ಅನುಭವಿಸಿ ನಂತರ ಬೇರೆ ಪಕ್ಷಕ್ಕೆ ಹೋದವರು ಹಲವರಿದ್ದಾರೆ. ಪಕ್ಷ ಅಂದ ಮೇಲೆ ಹೋಗೋವವರು ಬರುವವರು ಸಹಜ ಪ್ರಕ್ರಿಯೆ. ಇದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ನ ರಾಜ್ಯ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ, ಜಿಲ್ಲಾಧ್ಯಕ್ಷ ತೀನಂ ಶ್ರೀನಿವಾಸ್ ಮುಂತಾದವರಿದ್ದರು.