ಜಿಲ್ಲಾಡಳಿತ ನೇತೃತ್ವದಲ್ಲಿ ಬಾಬಾಬುಡಾನ್ ಗಿರಿಯಲ್ಲಿ ಉರೂಸ್
ಚಿಕ್ಕಮಗಳೂರು, ಮಾ.14: ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್‌ಗಿರಿ ದರ್ಗಾದಲ್ಲಿ ಮೂರು ದಿನಗಳ ಉರೂಸ್ ಕಾರ್ಯಕ್ರಮಕ್ಕೆ ಜಿಲ್ಲಾಡಳಿತವು ಮುಜಾವರ್ ಮೂಲಕ ಚಾಲನೆ ನೀಡಿತು.
ಉರೂಸ್ ಕಾರ್ಯಕ್ರಮದ ನೇತೃತ್ವ ವಹಿಸಿಲು ಶಾಖಾದ್ರಿ ಗೌಸ್‌ಮೊಹಿದ್ದೀನ್ ತಂಡಕ್ಕೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಅನುಮತಿ ನೀಡಲಿಲ್ಲ. ಅಲ್ಲದೆ ದರ್ಗಾದ ಮೇಲೆ ಹಸಿರು ಚಾದರ ಹೊದಿಸಲು ಹಾಗೂ ಗೋರಿಗಳಿಗೆ ಗಂಧ ಲೇಪನಕ್ಕೆ ಅವಕಾಶ ಕೋರಿದ್ದರೂ ಅನುಮತಿಸಲು ಜಿಲ್ಲಾಡಳಿತ ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಶಾಖಾದ್ರಿ ನೇತೃತ್ವದ ತಂಡ ಉರೂಸ್ ಕಾರ್ಯಕ್ರಮವನ್ನು ಭಹಿಷ್ಕರಿಸಿತು. ಶಾಖಾದ್ರಿ ನೇತೃತ್ವದ ತಂಡದಲ್ಲಿ ಮುಖಂಡರಾದ ಸೈಯ್ಯದ್ ಮುನೀರ್ ಅಹಮ್ಮದ್, ಕೆ.ಎಸ್.ಖಲಂದರ್, ಕೆ.ಮುಹಮ್ಮದ್, ನಿಸಾರ್ ಅಹ್ಮದ್, ಜಂಶೀದ್, ಜಮೀರ್ ಅಹಮ್ಮದ್, ಸಿರಾಜ್ ಮತ್ತಿತರರು ನೇತೃತ್ವ ವಹಿಸಿದ್ದರು. ಜಿಲ್ಲಾಡಳಿತ ಕ್ರಮವನ್ನು ಖಂಡಿಸಿದ ಮುಸ್ಲಿಂ ಮುಖಂಡರು ಗುಹೆಯ ಬಳಿ ಕೆಲ ಹೊತ್ತು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಸರ್ಪಗಾವಲು ಹಾಕಿದ್ದರು. ಸ್ಥಳದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸದಂತೆ ಎಚ್ಚರ ವಹಿಸುವಂತೆ ಎಸ್ಪಿ ಕೆ.ಅಣ್ಣಾಮಲೈಯವರಿಗೆ ಜಿಲ್ಲಾಧಿಕಾರಿ ಜಿಸತ್ಯವತಿ ತಿಳಿಸಿದರು.
ಇದಕ್ಕೂ ಮುನ್ನ ಅತ್ತಿಗುಂಡಿಯಿಂದ ಗಂಧವನ್ನು ಮೆರವಣಿಗೆಯಲ್ಲಿ ತರುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.