ಗಲ್ಫ್ ರಾಷ್ಟ್ರಗಳಿಂದ ಮರಳುವ ನಿರುದ್ಯೋಗಿಗಳಿಗೆ ಸ್ವ ಉದ್ಯೋಗಕ್ಕೆ ನೆರವು
ಮಂಗಳೂರು, ಮಾ.15: ಗಲ್ಫ್ ರಾಷ್ಟ್ರಗಳಲ್ಲಿ ಮೈಮುರಿದು ದುಡಿದರೂ ಆರ್ಥಿಕ ಸಂಕಷ್ಟಕ್ಕೀಡಾಗಿ ಉಪಾಯವಿಲ್ಲದೆ ಮರಳುವ ನಿರುದ್ಯೋಗಿಗಳು ಸ್ವ ಉದ್ಯೋಗ ಮಾಡಲು ರಾಜ್ಯ ಸರಕಾರ ನೆರವು ನೀಡಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಈ ಬಗ್ಗೆ ಘೋಷಿಸಿದ್ದು, ಇದು ಹಲವಾರು ವರ್ಷಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ದುಡಿದರೂ ಆರ್ಥಿಕ ಚೈತನ್ಯ ಕಾಣದೆ ನೊಂದ-ಬೆಂದವರಿಗೆ ಅದರಲ್ಲೂ ಅವಿಭಜಿತ ದ.ಕ.ಜಿಲ್ಲೆಯ ಯುವಕರಿಗೆ ಆಶಾಕಿರಣವಾಗಿ ಪರಿಣಮಿಸಿದೆ.
ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಜಾರಿಗೊಳಿಸಲಾಗುವ ಈ ಯೋಜನೆ ಜಾರಿಯಾಗಲಿದೆ. ಗಲ್ಫ್‌ನಲ್ಲಿ ದುಡಿದರೂ ಬದುಕಿನ ನೆಲೆ ಕಾಣದ, ಊರಿಗೆ ಬಂದು ನೆಲೆಯೂರಲು ಆಶಿಸುವ ನಿರುದ್ಯೋಗಿಗಳಿಗೆ ಸ್ವಉದ್ಯೋಗ ಮಾಡಲು ಶೇ.3ರ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಈ ಯೋಜನೆಯ ಮೂಲಕ ನೀಡಲಾಗುತ್ತದೆ.
ಹೆಚ್ಚಿನ ಯುವಕರು ಗಲ್ಫ್ ರಾಷ್ಟ್ರಗಳ ಬಿಸಿಲ ತಾಪಕ್ಕೆ ಒಗ್ಗಿಕೊಳ್ಳಲಾಗದಿದ್ದರೂ ಮನೆಯವರ ಸಂಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವುದು ಸಾಮಾನ್ಯವಾಗಿದೆ. ಆದರೆ ಹಲವಾರು ಮಂದಿ ಈ ಸಂದರ್ಭ ನಾನಾ ತೊಂದರೆಗೀಡಾಗುತ್ತಿದ್ದಾರೆ. ಅಂತಹವರು ಅಲ್ಲಿ ಕೆಲಸ ಮಾಡಲಾಗದೆ ಊರಿಗೆ ಮರಳಲಾಗದೆ ಪರಿತಪಿಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ಈ ಬಜೆಟ್‌ನಲ್ಲಿ ಇದೀಗ ಇಂತಹ ಯುವಕರಿಗೆ ನೆರವು ನೀಡಲು ಸಾಧ್ಯವಾಗಲಿದೆ. ಗಲ್ಫ್‌ನಿಂದ ಮರಳಿದವರು ಯಾವುದೇ ಕಾರಣಕ್ಕೂ ತಮ್ಮ ಬದುಕಿನ ಬಗ್ಗೆ ಅಭದ್ರರಾಗದೆ ಸ್ವ ಉದ್ಯೋಗ ಮಾಡಿ ಸ್ವಾಭಿಮಾನಿ ಬದುಕು ಸಾಗಿಸಬೇಕು ಎಂಬುದು ಇದರ ಉದ್ದೇಶವಾಗಿದೆ.ಗಲ್ಫ್‌ನಲ್ಲಿ ದುಡಿಯಲು ತೀರಾ ಕಷ್ಟ ಸಾಧ್ಯ ಎಂದು ಮನವರಿಕೆಯಾದೊಡನೆ ನೇರ ಊರಿಗೆ ಮರಳಿ ಸ್ವ ಉದ್ಯೋಗ ಮಾಡಲು ಈ ಯೋಜನೆಯ ಮೂಲಕ ಅವಕಾಶವಿದೆ.
ಇಂತಹ ಯುವಕರು ಅರ್ಜಿ ಸಲ್ಲಿಸಿದ ಬಳಿಕ ಅವರಿಗೆ ಸೂಕ್ತ ಕೌನ್ಸಿಲಿಂಗ್ ನೀಡಿ ಯಾವ್ಯಾವ ಉದ್ಯೋಗ ಮಾಡಬಹುದು? ಅದರ ಸಾಧಕ ಬಾಧಕಗಳು ಏನು?ಎಂಬುದನ್ನು ತಿಳಿಸಿ ಕಾರ್ಯಗತಗೊಳಿಸಲು ಸರಕಾರ ನಿರ್ಧರಿಸಿದೆ.
‘ಇದೊಂದು ಅತ್ಯುತ್ತಮ ಬಜೆಟ್. ಅದರಲ್ಲೂ ಅಲ್ಪಸಂಖ್ಯಾತರ ಹಿತಕ್ಕಾಗಿ ಸರಕಾರ ಕಟಿಬದ್ಧವಾಗಿದೆ ಎಂಬುದು ಇದರಿಂದ ಸಾಬೀತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ನಡೆಸಿದ ಪ್ರಯತ್ನ ಇದಾಗಿದೆ. ಕೇರಳ ಸರಕಾರದ ಮಾದರಿಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡಿ ನಾನಾ ಕಾರಣಕ್ಕಾಗಿ ಆರ್ಥಿಕವಾಗಿ ತೊಂದರೆಗೀಡಾದವರಿಗೆ ಇದು ವರದಾನವಾಗುವುದರಲ್ಲಿ ಸಂಶಯವಿಲ್ಲ. ಅವರು ಸ್ವ ಉದ್ಯೋಗ ಮಾಡುವುದದಲ್ಲದೆ ಇತರರಿಗೂ ಉದ್ಯೋಗವಕಾಶ ಕಲ್ಪಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಅಭಿಪ್ರಾಯಪಟ್ಟಿದ್ದಾರೆ.