ಸಾವಲ್ಲೂ ಸಮಯಪ್ರಜ್ಞೆ ಮೆರೆದು ಹಲವರ ಜೀವವುಳಿಸಿದ ಬಸ್ ಚಾಲಕ
ತುಮಕೂರು, ಮಾ.17: ಬಸ್ ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತಕ್ಕೊಳಗಾಗಿ ಚಾಲಕ ಮೃತಪಟ್ಟ ಘಟನೆ ಬರಗೂರು ಬಳಿ ಇಂದು ಬೆಳಗ್ಗೆ ನಡೆದಿದೆ. ಇದೇ ವೇಳೆ ಜೀವನ್ಮರಣ ಸ್ಥಿತಿಯಲ್ಲಿಯೂ ಚಾಲಕನ ಹಾಗೂ ನಿರ್ವಾಹಕನ ಸಮಯಪ್ರಜ್ಞೆ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರ ಜೀವ ಉಳಿಸಿದೆ.
ಬಸ್ ಚಾಲಕ ನಾಗರಾಜ್(56) ಮೃತಪಟ್ಟವರಾಗಿದ್ದಾರೆ.
ಗಡಿ ಪ್ರದೇಶವಾಗಿರುವ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಅಮರಪುರದಿಂದ ತುಮಕೂರಿನ ಶಿರಾ ಎಂಬಲ್ಲಿಗೆ ಬರುತ್ತಿದ್ದ ಶ್ರೀ ಗೋಪಾಲಕೃಷ್ಣ ಬಸ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬಸ್ ಬರಗೂರು ಬಳಿಯ ಲಕ್ಕನಹಳ್ಳಿಹಳ್ಳ ಎಂಬಲ್ಲಿ ತಲುಪಿದಾಗ ಚಾಲಕ ನಾಗರಾಜ್ ಅವರಿಗೆ ಹಠಾತ್ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಬಸ್ಸನ್ನು ತಹಬದಿಗೆ ತರಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಬಸ್ ಓಲಾಡುತ್ತಿರುವುದನ್ನು ಗಮನಿಸಿ ತಕ್ಷಣ ಕಾರ್ಯಪ್ರವೃತ್ತನಾದ ನಿರ್ವಾಹಕ ಕೂಡಲೇ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಬಸ್ ರಸ್ತೆಯನ್ನು ದಾಟಿ ಕಮರಿಗೆ ಬೀಳುವ ಹಂತಕ್ಕೆ ತಲುಪಿತ್ತು. ಘಟನೆಯ ವೇಳೆ ಬಸ್‌ನಲ್ಲಿ 18ರಿಂದ 20 ಮಂದಿ ಪ್ರಯಾಣಿಕರಿದ್ದು, ಯಾರೊಬ್ಬರಿಗೂ ಗಾಯಗಳಾಗಿಲ್ಲ.
ಬಸ್ ಚಾಲಕ ನಾಗರಾಜ್ ಮಾತ್ರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.