×
Ad

ಕಾಪಿ ಹೊಡೆದರೆ 3 ವರ್ಷ ಡಿಬಾರ್, ಶಿಕ್ಷಕರು, ಮೇಲ್ವಿಚಾರಕರು ಜೈಲಿಗೆ

Update: 2017-03-17 19:32 IST

ಬೆಂಗಳೂರು, ಮಾ.17: ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೇ 2016ನೆ ಸಾಲಿನ ಕರ್ನಾಟಕ ಶಿಕ್ಷಣ(ತಿದ್ದುಪಡಿ) ವಿಧೇಯಕ ಅಂಗೀಕಾರವಾಗಿದೆ.

 ಸರಕಾರದ ಧೋರಣೆಯನ್ನು ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರುಗಳು ಸಭಾತ್ಯಾಗ ಮಾಡಿ, ಸದನದಿಂದ ಹೊರ ನಡೆದ ಘಟನೆ ಕೂಡ ನಡೆಯಿತು.

ಸಚಿವ ತನ್ವೀರ್ ಸೇಠ್ ಮಾತನಾಡಿ, 2016ನೆ ಸಾಲಿನ ಕರ್ನಾಟಕ ಶಿಕ್ಷಣ(ತಿದ್ದುಪಡಿ) ವಿಧೇಯಕದಲ್ಲಿ ಕೆಲವು ಅಂಶಗಳನ್ನು ಸೇರಿಸಲಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಶಿಕ್ಷಕರು ಹಾಗೂ ಮೇಲ್ವಿಚಾರಕರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ.ದಂಡ ವಿಧಿಸಲಾಗುವುದು. ಹಾಗೂ ವಿದ್ಯಾರ್ಥಿಗಳು ಕಾಪಿ ಹೊಡೆಯುವ ಸಂದರ್ಭದಲ್ಲಿ ಸಿಕ್ಕಿ ಬಿದ್ದರೆ 3 ವರ್ಷಗಳ ಕಾಲ ಅವರನ್ನು ಡಿಬಾರ್ ಮಾಡಲಾಗುವುದು ಎಂದು ಹೇಳಿದರು.

   ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ 6 ಜನರನ್ನು ಜೈಲಿಗೆ ಕಳುಹಿಸಲಾಗಿದೆ. ಬೀದರ್ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಕಾಪಿ ಹೊಡೆಯಲು ಸಹಕರಿಸುತ್ತಿದ್ದ 3 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಹಾಗೂ ಮಾನ್ವಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಪಟ್ಟಂತೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

 ಜೆಡಿಎಸ್ ಸದಸ್ಯ ರಮೇಶ್‌ಬಾಬು ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಶಿಕ್ಷಕರು ಹಾಗೂ ಮೇಲ್ವಿಚಾರಕರಿಗೆ 5 ವರ್ಷ ಜೈಲು ಹಾಗೂ 5 ಲಕ್ಷ ರೂ.ದಂಡ ವಿಧಿಸುವುದು ಹಾಗೂ ವಿದ್ಯಾರ್ಥಿಗಳು ಕಾಪಿ ಹೊಡೆಯುವ ಸಂದರ್ಭದಲ್ಲಿ ಸಿಕ್ಕಿ ಬಿದ್ದರೆ ಅವರನ್ನು 3 ವರ್ಷಗಳ ಕಾಲ ಡಿಬಾರ್ ಮಾಡುವುದು ಸರಿಯಲ್ಲ. ಹೀಗಾಗಿ, 2016ನೆ ಸಾಲಿನ ಕರ್ನಾಟಕ ಶಿಕ್ಷಣ(ತಿದ್ದುಪಡಿ) ವಿಧೇಯಕವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

 ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ ಮಾತನಾಡಿ, ಹಳೆಯ ಕರ್ನಾಟಕ ಶಿಕ್ಷಣ ಕಾಯ್ದೆಯನ್ನೆ ಸರಿಯಾಗಿ ಅನುಷ್ಠಾನಗೊಳಿಸಿದ್ದರೆ ಸಾಕಾಗಿತ್ತು. ಆದರೆ, ಹೊಸ ಶಿಕ್ಷಣ(ತಿದ್ದುಪಡಿ) ವಿಧೇಯಕ ಬೇಕಾಗಿರಲಿಲ್ಲ ಎಂದು ಹೇಳಿದರು.

ಬಿಜೆಪಿ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ, ವಿದ್ಯಾರ್ಥಿಗಳನ್ನು 3 ವರ್ಷಗಳ ಕಾಲ ಡಿಬಾರ್ ಮಾಡುವುದು, ಶಿಕ್ಷಕರು ಹಾಗೂ ಮೇಲ್ವಿಚಾರಕರನ್ನು ಜೈಲಿಗೆ ಕಳುಹಿಸುವುದು ಸರಿಯಲ್ಲ ಎಂದು ಹೇಳಿದರು.

  2016ನೆ ಸಾಲಿನ ಕರ್ನಾಟಕ ಶಿಕ್ಷಣ(ತಿದ್ದುಪಡಿ) ವಿಧೇಯಕ ಹಾಗೂ ಸರಕಾರದ ಧೋರಣೆಯನ್ನು ಖಂಡಿಸಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರುಗಳು ಸಭಾತ್ಯಾಗ ಮಾಡಿ, ಸದನದಿಂದ ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News