×
Ad

ಶಿವಮೊಗ್ಗದಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ!

Update: 2017-03-17 22:51 IST

ಶಿವಮೊಗ್ಗ, ಮಾ. 17: ಶಿವಮೊಗ್ಗ ನಗರಕ್ಕೆ ನೀರು ಪೂರೈಕೆಯಾಗುವ ಗಾಜನೂರಿನ ತುಂಗಾ ಜಲಾಶಯದಲ್ಲಿ ನೀರಿನ ಕೊರತೆಯಾಗಿಲ್ಲ. ಆದರೆ, ಇತ್ತೀಚೆಗೆ ನಾನಾ ಕಾರಣಗಳಿಂದ ನಗರದ ಕೆಲ ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ಈ ನಡುವೆ ದುರಸ್ತಿಯ ಹಿನ್ನೆಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ನಗರಾದ್ಯಂತ ಕುಡಿಯುವ ನೀರು ಪೂರೈಕೆ ಸ್ಥಗಿತಗೊಳಿಸಿದ್ದರಿಂದ ನಾಗರಿಕರು ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.

ನಗರಕ್ಕೆ ಗಾಜನೂರಿನಿಂದ ನೀರು ಪೂರೈಕೆಯಾಗುವ 1,000 ಮಿ.ಮೀ. ವ್ಯಾಸದ ಗ್ರಾವಿಟಿ ಕೊಳವೆ ಮಾರ್ಗ ಮತ್ತು ಕೆ.ಆರ್. ವಾಟರ್ ವರ್ಕ್ಸ್ ನಿಂದ ಮೇಲ್ಮಟ್ಟದ ಜಲ ಸಂಗ್ರಹಗಾರಗಳಿಗೆ ನೀರು ಪೂರೈಕೆ ಮಾಡುವ ರೈಸಿಂಗ್ ಕೊಳವೆ ಮಾರ್ಗದಲ್ಲಿ ಉಂಟಾಗುವ ನೀರು ಸೋರಿಕೆಯನ್ನು ದುರಸ್ತಿ ಪಡಿಸುವ ಕಾರ್ಯವನ್ನು ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿ ಕೈಗೆತ್ತಿಕೊಂಡಿದೆ. ನೀರು ಪೂರೈಕೆಗೆ ಸಂಬಂಧಿಸಿದ ವಿದ್ಯುತ್ ಸ್ಥಾವರಗನಿರ್ವಹಣೆ ಕಾರ್ಯವನ್ನು ಮಾ. 16 ಮತ್ತು 17 ರಂದು ಮಾಡುತ್ತಿದ್ದು, ಇದರಿಂದ ಗಾಜನೂರು ತುಂಗಾ ಜಲಾಶಯದಿಂದ ನಗರಕ್ಕೆ ನೀರು ಪೂರೈಕೆ ಸ್ಥಗಿತಗೊಳಿಸಿತ್ತು. ತೊಂದರೆ: ಪ್ರಸ್ತುತ ನಗರಾದ್ಯಂತ ಸುಡು ಬಿಸಿಲು ಆವರಿಸಿದೆ.

ಕುಡಿಯುವ ನೀರಿಗೆ ಸಾಕಷ್ಟು ಬೇಡಿಕೆ ಕಂಡುಬರುತ್ತಿದೆ. ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಬಡಾವಣೆಗಳಿಗೆ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ನಡುವೆ ಸತತ ಎರಡು ದಿನಗಳ ಕಾಲ ನೀರು ಸ್ಥಗಿತಗೊಳಿಸುವ ನಿರ್ಧಾರದಿಂದ ನಗರದ ಬಹುತೇಕ ನಾಗರಿಕರು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಪರ್ಯಾಯ ವ್ಯವಸ್ಥೆಯಿಲ್ಲ: ಸತತ ಎರಡು ದಿನಗಳ ಕಾಲ ನೀರು ಪೂರೈಕೆ ಸ್ಥಗಿತಗೊಳಿಸಿದ್ದರೂ ನೀರಿಗೆ ತೀವ್ರ ಹಾಹಾಕಾರ ಕಂಡುಬರುವ ಸ್ಥಳಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ವ್ಯವಸ್ಥೆಯನ್ನು ನೀರು ಸರಬರಾಜು ಮಂಡಳಿ ಮಾಡಿಕೊಂಡಿಲ್ಲ.

ಇದಕ್ಕೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿಕೊಳ್ಳದಿರುವುದಕ್ಕೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಬೊಮ್ಮನಕಟ್ಟೆಯ ಕೆಲ ಪ್ರದೇಶಗಳಿಗೆ 2-3ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ನೀರಿಗೆ ಪರಿತಪಿಸುವಂತಹ ಸ್ಥಿತಿ ಯಿದೆ. ಇದೀಗ ಎರಡು ದಿನಗಳ ಕಾಲ ನಿರಂತರವಾಗಿ ನೀರು ಪೂರೈಕೆ ಸ್ಥಗಿತಗೊಳಿಸುವುದರಿಂದ ಸಮಸ್ಯೆ ಹೆಚ್ಚಾಗಿದೆ. ವಿಜಯ್, ಬೊಮ್ಮನಕಟ್ಟೆಯ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News