ಮನೆಗಳ್ಳತನ: ನಾಲ್ಕು ಮಂದಿಯ ಬಂಧನ
ದಾವಣಗೆರೆ, ಮಾ.17: ನಗರದ ವಿವಿಧೆಡೆ ಮನೆಗಳ್ಳತನ ನಡೆಸುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ ದಾವಣಗೆರೆ ಪೊಲೀಸರು, ಅವರಿಂದ 7.5 ಲಕ್ಷ ರೂ. ವೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.
ಬಂಧಿತರನ್ನು ಚೆನ್ನಗಿರಿ ತಾಲೂಕು ಸಂತೆಬೆನ್ನೂರಿನ ಚಿಕ್ಕಬ್ಬಿಗೆರೆ ಗ್ರಾಮದ ತಿಪ್ಪೇಶ್ ಅಲಿಯಾಸ್ ಕೆಪ್ಪತಿಪ್ಪ(40), ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಹುಣಸೆಕಟ್ಟೆ ಗ್ರಾಮದ ರಂಗಪ್ಪ (30), ತುಮಕೂರು ಜಿಲ್ಲೆಯ ಸೈಯದ್ ಬಾಷಾ(30), ಹಿರಿಯೂರಿನ ಗಂಗಾಧರ್(27) ಎಂದು ತಿಳಿದು ಬಂದಿದ್ದು, ಬಂಧಿತರಿಂದ 236 ಗ್ರಾಂ ಚಿನ್ನದ ಒಡವೆಗಳು ಮತ್ತು 2 ಕೆ.ಜಿ. 680 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಮಾ.7 ರಂದು ಆರೋಪಿಗಳು ನಗರದ ಜಯದೇವ ವೃತ್ತದಲ್ಲಿ ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಬಂಗಾರದ ಹಾಗೂ ಬೆಳ್ಳಿಯ ಒಡವೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಅನುಮಾನಗೊಂಡ ಪೊಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಗರದ ಹಲವೆಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆೆ.
ಹಿರಿಯೂರಿನ ಗಂಗಾಧರ್‌ನನ್ನು ಹೊರತು ಪಡಿಸಿ ಉಳಿದ ಮೂವರು ವೃತ್ತಿನಿರತ ಕಳ್ಳರಾಗಿದ್ದು, ಕೆಟಿಜೆ ನಗರ ಹಾಗೂ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಮನೆಗಳ ಬೀಗ ಮುರಿದು ಕಳವು ನಡೆಸುತ್ತಿದ್ದ ಬಗ್ಗೆ ಹಲವಾರು ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ ಎಂದು ತಿಳಿದು ಬಂದಿದೆ.
ಕಳವು ಮಾಡಿರುವ ಕೆಲ ಆಭರಣಗಳನ್ನು ಹಿರಿಯೂರಿನ ಗಂಗಾಧರ ಎಂಬಾತನಿಗೆ ಮಾರಾಟ ಮಾಡಿರುವುದಾಗಿ ವಿಚಾರಣೆಯ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.