ಅಪಘಾತದಲ್ಲಿ ಅತ್ತಿಗೆ, ಮೈದುನ ದಾರುಣ ಸಾವು
ಪಾಂಡವಪುರ, ಮಾ.18: ರಸ್ತೆ ಅಪಘಾತದಲ್ಲಿ ಅತ್ತಿಗೆ ಮತ್ತು ಮೈದುನ ಇಬ್ಬರೂ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿನಕುರಳಿ ಸಮೀಪದ ಮಂಚನಹಳ್ಳಿ ಗೇಟ್ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.
ಮೃತಪಟ್ಟವರನ್ನು ಚನ್ನರಾಯಪಟ್ಟಣ ತಾಲೂಕಿನ ಚಾಮರಹಳ್ಳಿ ಗ್ರಾಮದ ಕಾಂತರಾಜು(45) ಮತ್ತು ಪಾಂಡವಪುರ ತಾಲೂಕು ಕಾಳೇಗೌಡನಕೊಪ್ಪಲು ಗ್ರಾಮದ ಸ್ವಾಮೀಗೌಡರ ಹೆಂಡತಿ ಮಣಿ(42) ಎಂದು ಗುರುತಿಸಲಾಗಿದೆ.
ಚನ್ನರಾಯಪಟ್ಟಣ ಕಡೆಯಿಂದ ಕಾಂತರಾಜು ಮತ್ತು ಮಣಿ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮಂಚನಹಳ್ಳಿ ಗೇಟ್ ಬಳಿ ಎದುರಿನಿಂದ ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ಕಾಂತರಾಜು ಸ್ಥಳದಲ್ಲೆ ಮೃತಪಟ್ಟರು. ತೀವ್ರವಾಗಿ ಗಾಯಗೊಂಡಿದ್ದ ಮಣಿ ಚಿಕಿತ್ಸೆಗೆ ಮೈಸೂರಿಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದರು.
ಪಟ್ಟಣದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗೆ ಇಡಲಾಗಿತ್ತು. ಈ ವೇಳೆ ಕುಟುಂಬದ ಸದಸ್ಯರ ರೋಧನ ಮುಗಿಲುಮುಟ್ಟಿತ್ತು. ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಂಗಿ ಮನೆಗೆ ಹಬ್ಬಕ್ಕೆ ಹೋಗಿದ್ದ ಅಕ್ಕ:
ಮೃತ ಮಣಿ ಮೂಲತಃ ಶಾದನಹಳ್ಳಿ ಗ್ರಾಮದವರಾಗಿದ್ದು, ಇವರಿಗೆ ಕಾಳೇಗೌಡನಕೊಪ್ಪಲು ಗ್ರಾಮದ ಸ್ವಾಮೀಗೌಡ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮಣಿಯ ಮತ್ತೊಬ್ಬ ಸಹೋದರಿಯನ್ನು ಚನ್ನರಾಯಪಟ್ಟಣ ತಾಲೂಕಿನ ಚಾಮರಹಳ್ಳಿ ಗ್ರಾಮದ ಕಾಂತರಾಜುರವರಿಗೆ ವಿವಾಹ ಮಾಡಿಕೊಟ್ಟಿದ್ದರು.
ಮಣಿ ಕಳೆದ 2 ದಿನದ ಹಿಂದೆ ಹಬ್ಬಕ್ಕೆಂದು ತಂಗಿ ಮನೆಗೆ ಹೋಗಿದ್ದರು. ಹಬ್ಬ ಮುಗಿಸಿಕೊಂಡು ಮೈದುನನೊಂದಿಗೆ ಬೈಕ್‌ನಲ್ಲಿ ಊರಿಗೆ ಮರಳುವ ವೇಳೆ ಅಪಘಾತ ಸಂಭವಿಸಿ ಇಬ್ಬರೂ ಮೃತಪಟ್ಟರು. ಮಣಿ ಅವರಿಗೆ ಪುತ್ರ, ಪುತ್ರಿ ಇದ್ದರೆ, ಕಾಂತರಾಜುವಿಗೂ ಮಗಳು, ಪುತ್ರ ಇದ್ದಾರೆ.