ಬಾವಿಗೆ ಹಾರಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
ನಾಗಮಂಗಲ, ಮಾ.18: ಕಾಲೇಜು ವಿದ್ಯಾರ್ಥಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತೊಳಲಿಕೆರೆ ಸಮೀಪ ನಡೆದಿದೆ.
ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿ ಶರತ್‌ಕುಮಾರು(19) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಶರತ್‌ಕುಮಾರ್ ಬೆಳ್ಳೂರು ಹೋಬಳಿ ಬಣ್ಣದ ಹಳ್ಳಿಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಯೋಗಮೂರ್ತಿ ಎಂಬುವರ ಪುತ್ರನಾಗಿದ್ದಾನೆ. ಮೂಲತಃ ಕೆ.ಆರ್.ಪೇಟೆ ತಾಲೂಕು ಸಾಸಲು ಗ್ರಾಮದವರಾದ ಯೋಗಮೂರ್ತಿ ಹಾಲಿ ಚುಂಚನಹಳ್ಳಿಯಲ್ಲಿ ವಾಸವಿದ್ದರು.
ಎಂದಿನಂತೆ ಶನಿವಾರ ಕಾಲೇಜಿಗೆಂದು ಆಗಮಿಸಿದ್ದ ಶರತ್‌ಕುಮಾರ್ ಬೆಳಗ್ಗೆ ತನ್ನ ಕಾಲೇಜು ಸ್ನೇಹಿತನೋರ್ವನ ಮೊಬೈಲ್‌ಗೆ ಕರೆಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ. ನಂತರ, ಆತ ತೊಳಲಿ ಗ್ರಾಮದ ಕೆರೆಯ ಸಮೀಪವಿರುವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ವಿದ್ಯಾರ್ಥಿಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪ್ರೇಮ ವೈಫಲ್ಯವೇ ಈತನ ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ. ಸುದ್ದಿ ತಿಳಿದ ಪ್ರಾಂಶುಪಾಲ ರಾಮು, ಉಪನ್ಯಾಸಕರು, ವಿದ್ಯಾರ್ಥಿಗಳು ಸ್ಥಳಕ್ಕೆ ಆಗಮಿಸಿದ್ದರು.
ಪಟ್ಟಣ ಠಾಣೆಯ ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.