ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಎರಡು ಕೆಎಟಿ ಪೀಠಗಳ ಸ್ಥಾಪನೆಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು,ಮಾ.18: ರಾಜ್ಯದಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಪ್ರತ್ಯೇಕವಾಗಿ ಎರಡು ಕೆಎಟಿ ಪೀಠಗಳ ಸ್ಥಾಪನೆಯ ಜೊತೆಗೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಲು ಸರಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ ಆಯೋಜಿಸಿದ್ದ ಅರೆ ನ್ಯಾಯಾಂಗ ಘಟಕಗಳ ಕಾರ್ಯ ಸುಧಾರಣೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ನ್ಯಾಯಾಂಗ ವ್ಯವಸ್ಥೆ ತನ್ನ ಕ್ರಿಯಾಶೀಲತೆಯ ವೇಗವನ್ನು ಪಡೆದುಕೊಳ್ಳಬೇಕಿದೆ. ನನೆಗುದಿಗೆ ಬಿದ್ದಿರುವ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲು ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಪ್ರತ್ಯೇಕವಾಗಿ ಎರಡು ಪೀಠಗಳ ಸ್ಥಾಪನೆ ಕುರಿತು ಪರಿಶೀಲನೆಯಲ್ಲಿದೆ. ಜೊತೆಗೆ ಈ ಪೀಠಗಳಿಗೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಗಳು, ಮಾಹಿತಿ ಆಯೋಗಗಳು ಮತ್ತಿತರ ಟ್ರಿಬ್ಯುನಲ್‌ಗಳು, ವಿಚಾರಣಾ ಆಯೋಗ, ಒಂಬುಡ್ಸ್‌ಮನ್ ಮತ್ತಿತರ ಸಂಸ್ಥೆಗಳು ಅರೆ ನ್ಯಾಯಿಕ ವ್ಯವಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇದು ಆಡಳಿತ ಸುಧಾರಣೆಗೆ ಸಹಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಕಡಿಮೆ ವೆಚ್ಚದಲ್ಲಿ, ಕಡಿಮೆ ಸಮಯದಲ್ಲಿ ಗುಣಮಟ್ಟದ ನ್ಯಾಯದಾನ ಮಾಡುವುದು ಈ ಅರೆ ನ್ಯಾಯಾಂಗ ಅಂಗಗಳ ಪ್ರಮುಖ ಗುರಿಯಾಗಿರಬೇಕು ಎಂದು ಹೇಳಿದ ಅವರು, ಕರ್ನಾಟಕ ಮೇಲ್ಮನವಿ ಟ್ರಿಬ್ಯುನಲ್‌ನಲ್ಲಿ ಪ್ರಕರಣ ನಿಗಾ ವ್ಯವಸ್ಥೆಯನ್ನು ಜಾರಿ ಮಾಡಿದೆ. ಇದಕ್ಕಾಗಿ ಸರಕಾರ 9.74 ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ್ ಎಂ.ಶಾಂತನಗೌಡರ್ ಮಾತನಾಡಿ, ಸೇವಾ ವಲಯದಲ್ಲಿ ನ್ಯಾಯಾಧೀಕರಣಗಳು ಹೆಚ್ಚಾಗಬೇಕು. ಅರೆ ನ್ಯಾಯಾಂಗ ಪ್ರಾಧಿಕಾರಗಳಲ್ಲಿ ಕೊರತೆಯಿರುವ ಸಿಬ್ಬಂದಿಯನ್ನು ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನಿಡಿದರು.
ಕಕ್ಷಿದಾರರು ಬಡವರು ಎನ್ನುವ ಮಾತ್ರಕ್ಕೆ ನ್ಯಾಯದಾನವನ್ನು ನ್ಯಾಯಾಧೀಶರು ನಿರಾಕರಣೆ ಮಾಡಬಾರದು. ಬಡವರ ನಿರೀಕ್ಷೆಗೆ ನ್ಯಾಯಾಧೀಶರು ಸ್ಪಂದಿಸಿ ನ್ಯಾಯಾಂಗದ ವೃತ್ತಿಪರತೆಯನ್ನು ಎತ್ತಿಹಿಡಿಯಬೇಕಿದೆ ಎಂದು ಹೇಳಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮಾತನಾಡಿ, ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ ಇರುವುದರಿಂದ ನ್ಯಾಯದಾನ ವಿಳಂಬವಾಗುತ್ತಿದೆ. ಇದರಿಂದ ನ್ಯಾಯಾಂಗದ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸರಕಾರ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಸೇರಿದಂತೆ ಇತರರು ಇದ್ದರು.