×
Ad

ಜಾತಿ ಮೀರಿದ ಸರಳ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು: ದಿನೇಶ್ ಅಮೀನ್ ಮಟ್ಟು

Update: 2017-03-19 18:59 IST

ಶಿವಮೊಗ್ಗ, ಮಾ. 19: ಜಾತಿಗಳನ್ನು ಮೀರಿದ, ಸರಳ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು. ಆಡಂಭರದ ಮದುವೆಗಳಿಂದ ಬರೀ ಹಣ ವೆಚ್ಚವಾಗುತ್ತದೆ ಎಂಬುವುದರ ಅರಿವು ಆಗಬೇಕುಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟುವರವರು ಅಭಿಪ್ರಾಯಪಟ್ಟಿದ್ದಾರೆ.

 ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಭಾಸ್ಕರ್ ಬಿ.ಪಿ. ಹಾಗೂ ಚೈತ್ರಾ ಬಿ. ರವರ ಮಂತ್ರ ಮಾಂಗಲ್ಯ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಮಂತ್ರ ಮಾಂಗಲ್ಯ ಎಂಬುವುದು ಅರ್ಥಪೂರ್ಣ, ಸರಳ ವಿವಾಹ ಮಾರ್ಗವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ರಾಷ್ಟ್ರಕವಿ ಕುವೆಂಪುರವರನ್ನು ಮತ್ತೆ ಮತ್ತೆ ಜೀವಂತವಾಗಿಸುವ ಪ್ರಯತ್ನಗಳು ನಡೆಯುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿಯಾಗಿದ್ದು, ಈ ರೀತಿಯ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದರು.

ದಂಪತಿಗಳ ನಡುವೆ ಪರಸ್ಪರ ಪ್ರೀತಿ, ಅನ್ಯೋನ್ಯತೆ, ಮುಕ್ತತೆ ಇರಬೇಕು. ಅಭಿಪ್ರಾಯಗಳಿಗೆ ಗೌರವವಿರಬೇಕು. ಆಗ ಮಾತ್ರ ಉತ್ತಮ ದಾಂಪತ್ಯ ಜೀವನ ಸಾಧ್ಯವಾಗಲಿದೆ ಎಂದು ಹೇಳಿದರು.

ಪ್ರೀತಿಗೆ ಅಪಾರ ಶಕ್ತಿಯಿದೆ. ಸಮಾಜವನ್ನು ಒಂದುಗೂಡಿಸುವ, ದ್ವೇಷ ಮರೆಸುವ ತಾಕತ್ತಿದೆ. ಜೀವನದಲ್ಲಿ ಪ್ರೀತಿಯು ನಿತ್ಯ ನೂತನವಾಗಿರಬೇಕು. ಆದರೆ ಸಿನಿಮಾದಲ್ಲಿ ತೋರಿಸುವ ಮೂರು ಗಂಟೆಯ ಪ್ರೀತಿಯಂತಾಗಿರಬಾರದು ಎಂದು.

ಪ್ರಗತಿಪರ ಚಿಂತಕಿ ಭಾನು ಮುಸ್ತಾಕ್‌ ಮಾತನಾಡಿ, ಮನುಷ್ಯ ಮನುಷ್ಯರ ನಡುವಿನ ಗೋಡೆ ಕೆಡವುವಂತಹ ಕೆಲಸ ಮಾಡಬೇಕು. ನಾವೆಲ್ಲರೂ ಒಂದೇ ಎಂಬ ಕಲ್ಪನೆ ಬೆಳೆಯಬೇಕು. ಮಂತ್ರ ಮಾಂಗಲ್ಯ ವಿವಾಹ ಸಂಖ್ಯೆಗಳು ಹೆಚ್ಚಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕರಾದ ಡಾ. ಮಲ್ಲಿಕಾರ್ಜುನ ಮೇಟಿ, ಪತ್ರಕರ್ತ ಎನ್.ರವಿಕುಮಾರ್ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News