ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಆಯ್ಕೆ ತಪ್ಪು ನಿರ್ಧಾರ: ಮಲ್ಲಿಕಾರ್ಜುನ ಖರ್ಗೆ
ಯಾದಗಿರಿ, ಮಾ.19: ಬಿಜೆಪಿ ನಾಯಕರ ತಪ್ಪು ನಿರ್ಧಾರದಿಂದ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಆಯ್ಕೆಯಾಗಿದ್ದಾರೆ ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸದಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಉತ್ತರ ಪ್ರದೇಶದಲ್ಲಿ ಬಹುಮತ ಪಡೆದಿರುವುದರಿಂದ ಮುಖ್ಯಮಂತ್ರಿ ಆಯ್ಕೆ ಆ ಪಕ್ಷದ ಆಂತರಿಕ ವಿಚಾರವಾಗಿದೆ. ಆದರೆ, ಯೋಗಿ ಆದಿತ್ಯನಾಥ ಅನೇಕ ಬಾರಿ ಸಂವಿಧಾನ ವಿರೋಧಿ ಹೇಳಿಕೆ ನೀಡುವ ಮೂಲಕ ಹಿಂಸೆಗಳಿಗೆ ಪ್ರಚೋದನೆ ನೀಡಿದ್ದಾರೆ. ಇಂತವರನ್ನು ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದರು.
ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ ನಡೆಸುವ ಆಡಳಿತವನ್ನು ಭವಿಷ್ಯದಲ್ಲಿ ಕಾದು ನೋಡಬೇಕಾಗಿದೆ. ಜನಪರ ಆಡಳಿತ ನೀಡುವಲ್ಲಿ ಅವರು ಸಫಲರಾದರೇ ಕಾಂಗ್ರೆಸ್ ಅವರಿಗೆ ಸರ್ವ ರೀತಿಯ ಬೆಂಬಲ ನೀಡಲಿದೆ. ಒಂದು ವೇಳೆ ಜನವಿರೋಧಿ ಆಡಳಿತಕ್ಕೆ ಮುಂದಾದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಿಜೆಪಿಯ ಮನೋಹರ ಪರಿಕ್ಕರ್‌ಗೆ ಸರಕಾರ ರಚಿಸಲು ಆಹ್ವಾನಿಸುವ ಮೂಲಕ ಅಲ್ಲಿನ ರಾಜ್ಯಪಾಲರು ಕೇಂದ್ರದ ಗೃಹ ಸಚಿವ ರಾಜನಾಥ ಸಿಂಗ್‌ರ ಆದೇಶವನ್ನು ಪಾಲಿಸಿದ್ದಾರೆ ಎಂದು ಅವರು ಆರೋಪಿಸಿದರು.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಸೋಲುಂಡ ಪ್ರತಿಪಕ್ಷಗಳು ಸೋಲಿನ ಹೊಣೆಯನ್ನು ಇವಿಎಂ ಯಂತ್ರಗಳ ಮೇಲೆ ಹಾಕುತ್ತಿರುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಸೋಲನ್ನು ಒಪ್ಪಿಕೊಂಡಾಗ ಮಾತ್ರ ಸೋಲಿಗೆ ನಿಖರವಾದ ಕಾರಣಗಳು ತಿಳಿಯಲು ಸಾಧ್ಯ. ಆ ಮೂಲಕ ಮುಂದಿನ ಚುನಾವಣೆಯಲ್ಲಿ ಗೆಲುವಿಗೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವೆಂದು ಅವರು ಹೇಳಿದರು.