​ಪತ್ನಿ ಹತ್ಯೆ: ಆರೋಪಿಗೆ ಜೀವಾವಧಿ ಶಿಕ್ಷೆ

Update: 2017-03-19 17:25 GMT

ಶಿವಮೊಗ್ಗ, ಮಾ. 19: ಪತ್ನಿಯ ಹತ್ಯೆ ನಡೆಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಜೀವಾವಧಿ ಶಿಕ್ಷೆ ಹಾಗೂ 55ಸಾವಿರ ರೂ. ದಂಡ ವಿಧಿಸಿ 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.


ಶಿಕಾರಿಪುರ ತಾಲೂಕು ಮುಗುಳಿಕೊಪ್ಪ ನಿವಾಸಿ ಗಂಗಾಧರ (30) ಶಿಕ್ಷೆಗೊಳಗಾದವರು. ಪತ್ನಿ ರೇಣುಕಮ್ಮ (26)ಕೊಲೆಗೀಡಾದವರಾಗಿದ್ದಾರೆ.


ಗಂಗಾಧರಗೆ ವಿಧಿಸಲಾಗಿರುವ ದಂಡದ ಹಣದಲ್ಲಿ ಮೃತ ರೇಣುಕಮ್ಮ ಅವರ ಎರಡು ವರ್ಷದ ಮಗುವಿನ ಹೆಸರಿನಲ್ಲಿ 40 ಸಾವಿರ ರೂ. ಠೇವಣಿ ಇಡುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ. ಪ್ರಕರಣದ ಹಿನ್ನೆಲೆ: ಮದ್ಯ ವ್ಯಸನಿಯಾಗಿದ್ದ ಗಂಗಾಧರ ಪ್ರತಿನಿತ್ಯ ಕುಡಿದು ಬಂದು ಪತ್ನಿಗೆ ದೈಹಿಕ - ಮಾನಸಿಕ ಹಿಂಸೆ ನೀಡುತ್ತಿದ್ದ. 2014ನೆ ಅಕ್ಟೊ  ೀಬರ್ 1 ರಂದು ರಾತ್ರಿ ಗಂಗಾಧರ ಎಂದಿನಂತೆ ಮದ್ಯ ಸೇವಿಸಿ ಮನೆಗೆ ಆಗಮಿಸಿದ್ದು, ಊಟ ಮಾಡುವ ಸಂದಭರ್ ಪಲ್ಯ ನೀಡಿಲ್ಲ ಎಂದು ಆಕ್ರೋಶಗೊಂಡು ಪತ್ನಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಮನೆಯ ಹಿಂಭಾಗಕ್ಕೆ ಎಳೆದೊಯ್ದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ತೀವ್ರ ಸ್ವರೂಪದ ಸುಟ್ಟ ಗಾಯಕ್ಕೆ ತುತ್ತಾಗಿದ್ದ ರೇಣುಕಮ್ಮ ಅವರನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸುಮಾರು ಒು ವಾರದ ನಂತರ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದರು.

ಈ ಕುರಿತಂತೆ ಶಿರಾಳಕೊಪ್ಪಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರೇಣುಕಮ್ಮ ಅವರು ಮೃತಪಡುವುದಕ್ಕೂ ಮುನ್ನ ತನ್ನ ಈ ಸ್ಥಿತಿಗೆ ಪತಿ ಗಂಗಾಧರ ಕಾರಣ ಎಂದು ಪೊಲೀಸರು ಹಾಗೂ ತಹಶೀಲ್ದಾರ್ ಸಮಕ್ಷಮದಲ್ಲಿ ಹೇಳಿಕೆ ನೀಡಿದ್ದರು. ಇದರ ಆಧಾರದಲ್ಲಿ ಪೊಲೀಸರು ಪತಿ ಗಂಗಾಧರನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಬಳಿಕ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಾದ - ಪ್ರತಿವಾದ ಆಲಿಸಿದ 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶೆ ಬಿ.ಜಿ.ರಮಾ ಅವರಿದ್ದ ಪೀಠ ವಿಚಾರಣೆಯ ವೇಳೆ ಗಂಗಾಧರನ ಕೃತ್ಯ ದೃಢಪಟ್ಟ ಹಿನ್ನೆಲೆಯಲ್ಲಿ ಐಪಿಸಿ ಕಲಂ 498 (ಎ) ಅಡಿಯ ಅಪರಾಧಕ್ಕೆ ಮೂರು ವರ್ಷಗಳ ಸಾದಾ ಸೆರೆವಾಸದ ಶಿಕ್ಷೆ ಹಾಗೂ 5,000 ರೂ. ದಂಡ, ಐಪಿಸಿ 302ರ ಅಡಿಯ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಪ್ರಾಣೇಶ ಭರತನೂರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News