ತಾಲೂಕು ರಚನೆಗೆ ಆಗ್ರಹ; ಕುಶಾಲನಗರ ಬಂದ್ ಯಶಸ್ವಿ
ಮಂಗಳವಾರ ಸಿಎಂ ಬಳಿಗೆ ನಿಯೋಗ
ಪಪಂ ಸೇರಿ ಹಲವು ಸಂಘ ಸಂಸ್ಥೆಗಳ ಬೆಂಬಲ
ಕುಶಾಲನಗರ, ಮಾ.19: ಕಾವೇರಿ ತಾಲೂಕು ರಚಿಸುವಂತೆ ಆಗ್ರಹಿಸಿ ಕಾವೇರಿ ತಾಲೂಕು ಹೋರಾಟ ಸಮಿತಿ, ಕುಶಾಲನಗರ ಪಟ್ಟಣ ಪಂಚಾಯತ್ ಸೇರಿ ವಿವಿಧ ಸಂಘ ಸಂಸ್ಥೆಗಳು ರವಿವಾರ ಬಂದ್‌ಗೆ ನೀಡಿದ್ದ ಕರೆಗೆ ನೀಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಶಸ್ವಿಯಾಗಿದೆ.
ಕುಶಾಲನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕುಶಾಲನಗರ ಗಡಿಭಾಗ ಕೊಪ್ಪ ಗೇಟ್, ಮಡಿಕೇರಿ ರಸ್ತೆಯ ಬೈಚನಹಳ್ಳಿಯ ಬ್ಲೂಮೂನ್ ಪೆಟ್ರೋಲ್ ಬಂಕ್, ಹಾಸನ ರಸ್ತೆಯ ಸೋಮೇಶ್ವರ ದೇವಾಲಯದವರೆಗಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು.
ಕುಶಾಲನಗರದಲ್ಲಿ ಸಾರಿಗೆ ಸಂಚಾರ ಎಂದಿನಂತೆ ಮುಂದುವರಿದಿತ್ತು. ಖಾಸಗಿ ವಾಹನಗಳ ಓಡಾಟ ಎಂದಿನಂತೆ ಕಂಡು ಬಂದರೂ ಬಂದ್ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಹೊರತುಪಡಿಸಿ ಜನರ ಓಡಾಟ ವಿರಳವಾಗಿತ್ತು.
ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬಂದ್‌ಗೆ ಕರೆ ನೀಡಲಾಗಿದ್ದು ಮಧ್ಯಾಹ್ನ 11 ರಿಂದ 12 ಗಂಟೆವರೆಗೆ ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪವೃತ್ತದಲ್ಲಿ ಹೋರಾಟಗಾರರು ಮಾನವ ಸರಪಳಿ ರಚಿಸಿ 1 ಗಂಟೆಗಳ ಕಾಲ ರಸ್ತೆ ತಡೆ ಡೆಸಿದರು. ತಾಲೂಕು ಹೋರಾಟ ಸಮಿತಿ ಪ್ರಮುಖರು, ಪಟ್ಟಣ ಪಂಚಾಯತ್ ಆಡಳಿತ ಮಂಡಳಿ ಪದಾಧಿಕಾರಿಗಳು, ವಿವಿಧ ಪಕ್ಷಗಳು ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು ರಸ್ತೆ ತಡೆ ನಡೆಸಿದರು.
ರಸ್ತೆ ಮಧ್ಯದಲ್ಲಿ ಕುಳಿತು ಕಾವೇರಿ ತಾಲೂಕು ರಚನೆಯಾಗಬೇಕೆಂದು ಆಗ್ರಹಿಸಿ ಹೋರಾಟಗಾರರು ಘೋಷಣೆ ಗಳನ್ನು ಕೂಗಿದರು. ಈ ಮಧ್ಯೆ ಗೀತೆಗಳನ್ನು ಹಾಡುವ ಮೂಲಕವೂ ಪ್ರತಿಭಟನೆ ಮುಂದುವರಿಯಿತು. ಮಡಿಕೇರಿ ಹಾಗೂ ಮೈಸೂರಿಗೆ ತೆರಳುವ ವಾಹನಗಳ ಮಾರ್ಗವನ್ನು ಬದಲಿಸಿ ಪರ್ಯಾಯ ರಸ್ತೆಯ ಮೂಲಕ ಸಂಚಾರಕ್ಕೆ ಕುಶಾಲನಗರ ಪೊಲೀಸರು ವ್ಯವಸ್ಥೆ ಕಲ್ಪಿಸಿದ್ದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕಾವೇರಿ ತಾಲೂಕು ಹೋರಾಟ ಸಮಿತಿ ಸಂಚಾಲಕ ವಿ.ಪಿ. ಶಶಿಧರ್, ಯಾವುದೇ ಒತ್ತಾಯವಿಲ್ಲದೆ ಕುಶಾಲನಗರದ ವರ್ತಕರು ಕುಶಾಲನಗರ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಟ್ಟಣದ ವಾಹನ ಚಾಲಕರೂ ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 1 ಗಂಟೆಗಳ ಕಾಲ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮಂಗಳವಾರ ಮುಖ್ಯಮಂತ್ರಿಯವರನ್ನು ನಿಯೋಗ ಭೇಟಿ ಮಾಡಿ ಅಹವಾಲು ಸಲ್ಲಿಸಲಿದೆ. ಪ್ರತ್ಯೇಕ ತಾಲೂಕು ರಚನೆಗೆ ಬೇಕಾದ ಎಲ್ಲಾ ಅಂಶಗಳು ಒಳಗೊಂಡಿರುವ ಕುಶಾಲನಗರ ಪಟ್ಟಣ ನೂತನ ತಾಲೂಕು ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲಿದೆ ಎಂದು ಆಶಯ ವ್ಯಕ್ತಪಡಿಸಿದ ಅವರು, ಪ್ರತ್ಯೇಕ ತಾಲೂಕು ರಚನೆಯಾಗುವವರೆಗೂ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದರು.
ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಕುಶಾಲ ನಗರ ಪ್ರತ್ಯೇಕ ತಾಲೂಕಿಗಾಗಿ ರಚನೆಯಾಗಬೇಕು ಎಂಬ ಸದುದ್ದೇಶದಿಂದ ಪಕ್ಷಾತೀತವಾಗಿ ನಡೆಸಿದ ಕುಾಲನಗರ ಬಂದ್ ಯಶಸ್ವಿಯಾಗಿದೆ. ಈ ಮೂಲಕ ಈ ಭಾಗದ ಜನತೆಯ ಆಗ್ರಹವನ್ನು ಸರಕಾರಕ್ಕೆ ಮುಟ್ಟಿಸುವ ಪ್ರಯತ್ನ ಇದಾಗಿದೆ. ಈಗಿನ 49 ನೂತನ ತಾಲೂಕುಗಳೊಂದಿಗೆ ಕುಶಾಲನಗರಕ್ಕೂ ಸ್ಥಾನ ಕಲ್ಪಿಸಬೇಕೆಂದು ಅವರು ಆಗ್ರಹಿಸಿದರು.
ಪತ್ರಿಭಟನೆಯಲ್ಲಿ ಕೆಲ ಕನ್ನಡಪರ ಸಂಘಟನೆಗಳ ಪ್ರಮುಖರು, ಪಂಚಾಯತ್‌ನ ಮಹಿಳಾ ಸದಸ್ಯರು ಗೈರಾಗಿರುವುದು ಕಂಡುಬಂತು. ಪೊಲೀಸ್ ಉಪ ಅಧೀಕ್ಷಕ ಸಂಪತ್‌ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ರಸ್ತೆ ತಡೆ ಸಂದರ್ಭ ಕುಶಾಲನಗರ ಪಟ್ಟಣ ಪಂಚಾ ಯತ್ ಅಧ್ಯಕ್ಷ ಎಂ.ಎಂ.ಚರಣ್, ನಾಮನಿರ್ದೇಶಿತ ಸದಸ್ಯ ನಂಜುಂಡಸ್ವಾಮಿ, ಫಝಲುಲ್ಲಾ, ಶಿವಶಂಕರ್, ಸದಸ್ಯರಾದ ಡಿ.ಕೆ.ತಿಮ್ಮಪ್ಪ, ಪ್ರಮೋದ್ ಮುತ್ತಪ್ಪ, ಕುಡಾ ಅಧ್ಯಕ್ಷ ಬಿ.ಜಿ.ಮಂಜುನಾಥ್, ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಪಿ. ಚಂದ್ರಕಲಾ, ಕಾಂಗ್ರೆಸ್ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಬಿಜೆಪಿ ನಗರಾಧ್ಯಕ್ಷ ಕೆ.ಜಿ. ಮನು, ಕಾರ್ಯದರ್ಶಿ ಎಚ್.ಡಿ. ಶಿವಾಜಿ, ಯುವಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ನಗರ ಕಾರ್ಯದರ್ಶಿ ನಿಡ್ಯಮಲೆ ದಿನೇಶ್, ಆಟೊ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಮಹೇಶ್, ಕೂಡುಂಗಳೂರು ಗ್ರಾಮ ಪಂಚಾಯತ್ ಸದಸ್ಯ ಭಾಸ್ಕರ್ ನಾಯಕ್, ಡಿಎ್ಎಸ್ ಜಿಲ್ಲಾ ಸಂಚಾಲಕ ಕೆ.ಬಿ.ರಾಜು, ಪ್ರಮುಖರಾದ ಎಂ.ಎನ್. ಕುಮಾರಪ್ಪ, ಜಿ.ಎಲ್. ನಾಗರಾಜ್, ಅಬ್ದುಲ್ ಖಾದರ್, ಅಮೃತ್‌ರಾಜ್, ಎಂ.ಕೆ. ದಿನೇಶ್, ಬಿ.ಜೆ.ಅಣ್ಣಯ್ಯ, ಎಚ್.ಎನ್.ರಾಮಚಂದ್ರ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.