×
Ad

ಬನ್ನೇರುಘಟ್ಟ ಕರಡಿ ಸಫಾರಿಯಿಂದ ಹೆಣ್ಣು ಕರಡಿ ನಾಪತ್ತೆ: ಅಧಿಕಾರಿಗಳು ಗುಟ್ಟಾಗಿ ಇಟ್ಟಿದ್ದು ಯಾಕೆ..?

Update: 2017-03-20 22:22 IST

ಆನೇಕಲ್, ಮಾ,20: ಬನ್ನೇರುಘಟ್ಟ ಕರಡಿ ಸಫಾರಿಯಲ್ಲಿ ಹೆಣ್ಣು ಕರಡಿಯೊಂದು ಪರಾರಿಯಾಗಿದೆ. ಕಳೆದು ಎರಡು-ಮೂರು ದಿನದ ಹಿಂದೆಯೇ ಕರಡಿ ತಪ್ಪಿಸಿಕೊಂಡಿದ್ದು, ಈ ಬಗ್ಗೆ ಸಫಾರಿಯ ಎನ್‌ಜಿಒ ಸಿಬ್ಬಂದಿ ಮಾಹಿತಿ ಹೊರಬಿಟ್ಟಿಲ್ಲ. ಈ ನಡುವೆ ಎರಡು ತಂಡಗಳನ್ನು ರಚಿಸಿ ಪ್ರತ್ಯೇಕವಾಗಿ ಸುತ್ತಲ ಗ್ರಾಮಗಳು ಮತ್ತು ಕಾಡಲ್ಲಿ ಕರಡಿ ಪತ್ತೆಗೆ ಕಳುಹಿಸಲಾಗಿದೆ.

ಇಂದು(ಸೋಮವಾರ) ಜಯಪುರ ದೊಡ್ಡಿಯ ಗ್ರಾಮಸ್ಥರೊಬ್ಬರಿಗೆ ಕರಡಿ ಕಂಡ ಮೇಲೆ ವಿಷಯ ಬೆಳಕಿಗೆ ಬಂದಿದೆ. ಅನಂತರ ಒಂದು ತಂಡ ಕರಡಿ ಹೊರಟ ಜಾಡನ್ನ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.

ಸುತ್ತಲ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಬಾರದೆಂದು ಮಾಹಿತಿ ಸೋರಿಕೆಗೆ ತಡೆ:

ಬನ್ನೇರುಘಟ್ಟ ಕರಡಿ ಸಫಾರಿಯಲ್ಲಿ ಸುಮಾರು 81 ಕರಡಿಗಳಿವೆ. ಇವುಗಳನ್ನ ಸರ್ಕಾರೇತರ ಸಂಸ್ಥೆ ಎಸ್‌ಒಎಸ್ ಕರಡಿಗಳನ್ನ ಸಲಹಿ ಸಾಧಕ ಬಾಧಕಗಳನ್ನ ನೋಡಿಕೊಳ್ಳುತ್ತಿದೆ. ಕರಡಿಗಳ ಪುನರ್ವಸತಿ ಕೇಂದ್ರ ಮತ್ತು ಸಫಾರಿ ಎರಡರಲ್ಲೂ ಸರಾಗವಾಗಿ ಓಡಾಡಿಕೊಂಡಿರೋ ಕರಡಿಗಳಲ್ಲಿ 34 ಗಂಡು, 47 ಹೆಣ್ಣು ಕರಡಿಗಳಿವೆ. ಅದರಲ್ಲಿ ಒಂದು ಹೆಣ್ಣು ನಾಪತ್ತೆಯಾಗಿದೆ ಎನ್ನುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

ಇದು ಮೊದಲಲ್ಲ:

ಈ ತರಹದ ಕರಡಿ ಸಫಾರಿಯಿಂದ ಪರಾರಿಯಾಗುವುದು ಇದೇ ಮೊದಲಲ್ಲ. ಒಮ್ಮೆ ಮಂಟಪ ಗ್ರಾಮದಲ್ಲಿ ಯಾರಿಗೂ ತಿಳಿಯದಂತೆ ರಾತ್ರಿ ಕತ್ತಲಲ್ಲಿ ಮದುವೆ ಮನೆಗೆ ನುಗ್ಗಿ ಜನರ ನಡುವೆ ಕರಡಿ ಮಲಗಿತ್ತು!

ಬೆಳಗ್ಗೆ ಎಲ್ಲರೂ ಕರಡಿ ಕಂಡು ಹೌಹಾರಿದ್ದರು. ಹಾಗೆಯೇ ಹಲವು ಗ್ರಾಮಸ್ಥರನ್ನ ಭೀತಿ ಗೊಳಿಸಿದ ಉದಾಹರಣೆಗಳು ಸಾಕಷ್ಟಿವೆ ಅಂತ ಹೆಸರು ತಿಳಿಸದ ಸಿಬ್ಬಂದಿ 'ವಾರ್ತಾಭಾರತಿ' ಮಾಹಿತಿ ನೀಡಿದ್ದಾರೆ.

ಪರಾರಿಯಾದ ಕರಡಿಯನ್ನ ಹೇಗೆ ಪತ್ತೆ ಹಚ್ಚುತ್ತಾರೆ:

ಸಫಾರಿಯನ್ನ ತೊರೆದು ಕಾಡಿಗೆ ಮತ್ತು ನಾಡಿಗೆ ತೆರಳುವ ಕರಡಿಯನ್ನ ವಿಶೇಷ ಪರಿಣಿತಿ ಹೊಂದಿದ ತಂಡ ಬೆನ್ನತ್ತುತ್ತದೆ. ದಟ್ಟ ಕಾಡಿನ ಪೊದೆಗಳು. ಜೇನು ನೊಣಗಳ ಚಲನ ವಲನ, ಕರಡಿ ಮೂತ್ರ ಮತ್ತು ಹೆಜ್ಜೆಗಳ ಜಾಡನ್ನಿಡಿದು ಹಿಂಬಾಲಿಸಲಾಗುತ್ತದೆ.

ಆಗಾಗ ದನಗಾಹಿಗಳ ಕಣ್ಣಿಗೂ ಬೀಳೋ ಸಾಧ್ಯತೆಗಳಿರೋದ್ರಿಂದ ಸುಲಭವಾಗಿ ಪತ್ತೆ ಹಚ್ಚಲಾಗುತ್ತದೆ. ಅಲ್ಲದೆ ಕುರಿ ಮೇಕೆ ಹೆದರಿ ಓಡಿದರೆ ಅಲ್ಲಿ ಕರಡಿ ಇದೆ ಎಂದು ಊಹಿಸಲಾಗುತ್ತದೆ.

ಇನ್ನು ಕರಡಿ ಮರದಲ್ಲಿ ಕಟ್ಟಿದ ಜೇನನ್ನ ಸವಿಯಲು ಹತ್ತಿದ್ದರೆ ನುರಿತ ಕರಡಿ ಪತ್ತೆದಾರಿಗಳಿಗೆ ಸುಲಭವಾಗಿ ಸಿಗುತ್ತದೆ. ಆಗ ಮರದ ಕೆಳಗಡೆ ಬಲೆ ಹಿಡಿದು ತಾತ್ಕಾಲಿಕ ಪ್ರಜ್ಞೆ ತಪ್ಪುವ ಅರಿವಳಿಕೆ ನೀಡಿ ಹಿಡಿಯಲಾಗುತ್ತದೆ. ಇಲ್ಲವಾದಲ್ಲಿ ಕಾಡಲ್ಲಿ ಮಾಗಿದ ಹಲಸಿನ ಹಣ್ಣು, ಕಲ್ಲಂಗಡಿ, ಜೇನು ಸವರಿ ಇಟ್ಟು ಕಾವಲು ಕಾಯೋ ತಂತ್ರಗಾರಿಕೆಯಿಂದ ಸೆರೆಹಿಡಿಯುತ್ತಾರೆ.

ಇಲ್ಲಿನ ಕರಡಿಗಳು ದೇಶಾದ್ಯಂತ ಸರ್ಕಸ್ ಹಾಗು ಕಲಂದರ್ ಕುಟುಂಬಗಳಿಂದ ಬೇರ್ಪಡಿಸಿ ಇಲ್ಲಿಗೆ ಕರೆತಂದು ಕೆಲ ಕುಟುಂಬಗಳನ್ನ ಅವುಗಳನ್ನ ನೋಡಿಕೊಳ್ಳುವುದಕ್ಕೆ ಇಲ್ಲಿಯೇ ವಸತಿ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಹೀಗೆ ಎಲ್ಲರ ಕಣ್ಣು ತಪ್ಪಿಸಿ ಪರಾರಿಯಾಗೋ ಕರಡಿಗಳು ಒಮ್ಮೊಮ್ಮೆ ಆಹಾರ-ನೀರು ಸಿಗದಿದ್ದರೆ ಗ್ರಾಮಗಳನ್ನ ಅವಲಂಬಿಸೋದು ಇದೆ. ಇಲ್ಲವಾದಲ್ಲಿ ಮತ್ತೆ ಸಫಾರಿಗೆ ಮರಳಿ ಬಂದ ದಾಖಲೆಗಳಿವೆ. ಕಲಂದರ್ ಕುಟುಂಬಗಳಲ್ಲಿ ಧಣಿದು ಬಂದಿರೋ ಕರಡಿಗಳು ಹೆಚ್ಚು ನಡೆಯದೆ ಸಾಮಾನ್ಯವಾಗಿ ಕಾಡಿಗೆ ಹೊಂದಿಕೊಳ್ಳುವುದಿಲ್ಲ ಮತ್ತು ಹೆಚ್ಚು ದೂರ ನಡೆಯಲಾರವು. ಹೀಗಾಗಿ ಸುತ್ತಲ ಹತ್ತಿರದಲ್ಲೇ ಸೆರೆಸಿಕ್ಕೋದು ಮಾಮೂಲಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News