×
Ad

ದಾವಣಗೆರೆ: 2017-18 ಮನಪಾ ಬಜೆಟ್ 5.37 ಕೋ.ರೂ. ಉಳಿತಾಯ ಬಜೆಟ್ ಮಂಡನೆ

Update: 2017-03-20 23:20 IST

ನಗರಾಭಿವೃದ್ಧಿಗೆ 51,097.68 ಲಕ್ಷ ರೂ.

ದಾವಣಗೆರೆ, ಮಾ.20: ಸ್ಥಳೀಯ ಮಹಾನಗರ ಪಾಲಿಕೆ 2017-18ನೆ ಸಾಲಿನ 5.37 ಕೋಟಿ ರೂ. ಉಳಿತಾಯ ಬಜೆಟ್‌ನ್ನು ಮೇಯರ್ ರೇಖಾ ನಾಗರಾಜ್ ಸೋಮವಾರ ಮಂಡಿಸಿದರು.ನಗರದ ಹೊರವಲಯದಲ್ಲಿರುವ ದೋಭಿಘಾಟ್ ಸಮೀಪದ ಪಂಪ್ ಹೌಸ್ ಬಳಿ ನಡೆದ ಆಯವ್ಯಯ ಮಂಡನೆ ಸಭೆಯಲ್ಲಿ ಬಜೆಟ್ ಭಾಷಣದಲ್ಲಿ ಮಾಹಿತಿ ನೀಡಿದ ಅವರು, ಯೋಜನೆ ಮತ್ತು ಯೋಜನೇತರ ಚಟುವಟಿಕೆಗಳಿಗಾಗಿ ಒಟ್ಟು 51,634.71 ಲಕ್ಷ ರೂ. ಗಾತ್ರದ ಬಜೆಟ್ ಮಂಡನೆ ಮಾಡಿದ್ದು, ಈ ಪೈಕಿ 51,097.68 ಲಕ್ಷ ರೂ.ಯನ್ನು ನಗರಾಭಿವೃದ್ಧಿಯ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಮೀಸಲಿಡುವ ಮೂಲಕ ಹೊಸ ಯೋಜನೆಗಳನ್ನು ಒಳಗೊಂಡ ಒಟ್ಟು 5.37 ಕೋಟಿ ರೂ.ಯ ಬಜೆಟ್ ಮಂಡಿಸಲಾಗಿದೆ ಎಂದರು.

 ಪಾಲಿಕೆ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಸರಬರಾಜು, ರಸ್ತೆ ಅಭಿವೃದ್ಧಿ, ಬೀದಿ ದೀಪ, ಒಳಚರಂಡಿ ಹಾಗೂ ನೈರ್ಮಲ್ಯ ಯೋಜನೆ, ಉದ್ಯಾನ ಹಾಗೂ ಸ್ಮಶಾನ ಅಭಿವೃದ್ಧಿ, ಸಾಮಾಜಿಕ ಹಾಗೂ ಹಿಂದುಳಿದ ವರ್ಗದ ಅಭಿವೃದ್ಧಿ, ಸುಗಮ ಸಂಚಾರ ನಿರ್ವಹಣೆ ಮತ್ತು ಸುರಕ್ಷತೆ ಸೇರಿದಂತೆ ಪ್ರಮುಖ ವಿಷಯಗಳಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ ಎಂದು ಮೇಯರ್ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪಅವರ ದೂರದೃಷ್ಟಿ ಮತ್ತು ಅಭಿವೃದ್ಧಿಪರ ಚಿಂತನೆಗಳಿಂದ ನಗರದಲ್ಲಿ ಕಳೆದ 2013-14 ರಿಂದ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕೈಗೊಳ್ಳುತ್ತಾ ಬರಲಾಗಿದೆ ಎಂದರು,.


ಪ್ರಸ್ತುತ ಆರ್ಥಿಕ ವರ್ಷದಲ್ಲಿ ಜಲಸಿರಿ, ಅಮೃತ ಯೋಜನೆ, ಸಮಗ್ರ ಒಳ ಚರಂಡಿ,ರಾಜೀವ್ ವಸತಿ ಯೋಜನೆ, ನಲ್ಮ್ ಯೋಜನೆಗಳ ಮೂಲಕ ನಗರದಲ್ಲಿ ಸುಮಾರು 2 ಸಾವಿರ ಕೋಟಿ ಗೂ ಹೆಚ್ಚು ಮೌಲ್ಯದ ಆಸ್ತಿ ಉತ್ಪಾದನೆಯಾಗುವ ಮತ್ತು ನಗರಾಭಿವೃದ್ಧಿಗಾಗಿ ಹಮ್ಮಿಕೊಂಡಿರುವ ನೂತನ ಯೋಜನೆಗಳನ್ನು ಇದೇ ವೇಳೆ ಪ್ರಕಟಿಸಿದರು. ಹಳೆಬಸ್ ನಿಲ್ದಾಣದ ಸಮಗ್ರ ಅಭಿವೃದ್ಧಿ, ಕುಂದುವಾಡ ಮತ್ತು ಟಿವಿ ಸ್ಟೇಷನ್ ಕೆರೆ ಪ್ರದೇಶದಲ್ಲಿ ವಾಕಿಂಗ್ ಪಾತ್, ಆಸನ ವ್ಯವಸ್ಥೆ, ಶೌಚಾಲಯ ನಿರ್ಮಾಣ, ಸೋಲಾರ್ ವಿದ್ಯುತ್ ದೀಪ ಅಳವಡಿಕೆ, ಕುಡಿಯುವ ನೀರು, ಹಸಿರೀಕರಣಕ್ಕಾಗಿ ಚಿಂತನೆ ಮಾಡಲಾಗಿದೆ. ಈಗಾಗಲೇ ಅಭಿವೃದ್ದಿಗೊಂಡಿರುವ ಪಾರ್ಕ್‌ಗಳ ನಿರ್ವಹಣೆಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಟಾಸ್ಕ್‌ಫೋರ್ಸ್ ರಚನೆ ಮಾಡಲು ಉದ್ದೇಶಿಸಿರುವುದಾಗಿ ಮೇಯರ್ ಹೇಳಿದರು.


ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಉಪಮೇಯರ್ ಬೆಳವನೂರು ನಾಗರಾಜ್, ಆಯುಕ್ತ ನಾರಾಯಣಪ್ಪ, ಪಾಲಿಕೆಯ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಆಸ್ತಿ ತೆರಿಗೆ ಹೆಚ್ಚಳದ ಆದಾಯ 2,035 ಲಕ್ಷ ರೂ., ಜಾಹಿರಾತು ಫಲಕಗಳಿಂದ 50 ಲಕ್ಷ ರೂ, ಪಾಲಿಕೆಯ ಮಳಿಗೆಗಳಿಂದ 254.65 ಲಕ್ಷ. ರೂ, ಕಟ್ಟಡ ಪರವಾನಿಗೆ ಅರ್ಜಿಗಳಿಂದ ಶುಲ್ಕ ರೂಪದಲ್ಲಿ 136 ಲಕ್ಷ ರೂ. ನೂತನ ಕಟ್ಟಡ ಪರವಾನಿಗೆಗೆಳ 1 ಕೋಟಿ ರೂ., ಒಎಫ್‌ಸಿ ಕೇಬಲ್ ಅಳವಡಿಕೆಯಿಂದ 1 ಕೋಟಿ ರೂ., ಆಸ್ತಿಗಳ ವರ್ಗಾವಣೆ ಮೇಲಿನ ಅಧಿಭಾರ ಶುಲ್ಕದಿಂದ 50 ಲಕ್ಷ ರೂ. ಹೀಗೆ ವಿವಿಧ ಬಗೆಯ ಹೊಸ ಆದಾಯ ಕ್ರೋಡೀಕರಣಕ್ಕೆ ಒತ್ತು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News