ಧರ್ಮ ಮತ್ತು ನಂಬಿಕೆ ಆಧಾರದಲ್ಲಿ ಭಾರತ ದೇಶ: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

Update: 2017-03-21 12:16 GMT

ನಾಪೋಕ್ಲು,ಮಾ.21: ಧರ್ಮ ಮತ್ತು ನಂಬಿಕೆ ಆಧಾರದಲ್ಲಿ ಭಾರತ ದೇಶ ಪ್ರಜ್ವಲಿಸುತ್ತಿದೆ. ಪ್ರತಿಯೊಂದು ಜೀವಿ ಮತ್ತು ಪರಿಸರದಲ್ಲಿ ನಾವು ದೇವರನ್ನು ಕಾಣುವವರು. ಹಿರಿಯರು ಹಾಕಿಕೊಟ್ಟ ಇಂತಹ ಚೌಕಟ್ಟಿನ ಮೂಲಕ ನಂಬಿಕೆ ಆಧಾರದಲ್ಲಿ ಭಾರತ ದೇಶ ಇದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಅವರು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನಿರ್ಮಾಣಗೊಂಡ ಕಛೇರಿ ಮತ್ತು ಭದ್ರತಾ ಕೊಠಡಿಯನ್ನು ಉದ್ಘಾಟಿಸಿ, ಮಾತನಾಡಿದರು.

ಯಾಂತ್ರಿಕೃತ ಬದುಕಿನ ಕಡೆ ಮನುಷ್ಯ ಹೋದಾಗ ಸಂಸ್ಕಾರ, ಸಂಸ್ಕೃತಿ ಕಳೆದುಕೊಳ್ಳುತ್ತಾನೆ. ಇದರಿಂದ ಕೇವಲ ಜೀವನದ ಬದುಕಿನ ಬಂಧನದಲ್ಲಿ ಸಿಲುಕಿ ಮನಶಾಂತಿ ಕಳೆದುಕೊಳ್ಳುತ್ತಾನೆ. ಇಂತಹ ಬಂಧನಕ್ಕೆ ಯುವಪೀಳಿಗೆ ಸಿಲುಕದೆ, ಯಾಂತ್ರಿಕೃತ ಬದುಕಿನೊಂದಿಗೆ, ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಿಕೊಳ್ಳುವ ಅಗತ್ಯತೆ ಇದೆ. ಸಮಾಜ ಆಧಾರ ಸ್ತಂಭಗಳಾದ ಪ್ರೀತಿ, ವಿಶ್ವಾಸ, ಸಂಸ್ಕೃತಿ, ಸಂಸ್ಕಾರ ಕಣ್ಮರೆಯಾಗದಂತೆ ಜೀವತುಂಬಬೇಕು. ಇಂತಹ ಕಾರ್ಯಗಳು ಆದಾಗ ನಮ್ಮ ಪರಂಪರೆಯ ಧರ್ಮ ಮತ್ತು ನಂಬಿಕೆಯ ಬಗ್ಗೆ ನಿಜವಾದ ಜೀವತುಂಬುತ್ತದೆ ಎಂದು ಅವರು ಹೇಳಿದರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಶ್ರಾಂತ ಕುಲಪತಿ ಡಾಟಿ.ಆರ್.ಸುಬ್ರಹ್ಮಣ್ಯ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಹರೀಶ್ಚಂದ್ರ, ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ನಾರಾಯಣ ಕೇಕಡ್ಕ, ಪ್ರಗತಿಪರ ಕೃಷಿಕ ರಾಜೇಂದ್ರ ಪ್ರಸಾದ್ ಮರುವಳ, ಸಂಪಾಜೆ ಗ್ರಾ.ಪಂ.ಅಧ್ಯಕ್ಷೆ ಯಶೋಧ ಕಡೆಪಾಲ, ಅರಣ್ಯ ಅಭಿವೃದ್ಧಿ ನಿಗಮದ ಡಿವಿಜನ್ ಮ್ಯಾನೇಜರ್ ಪಿ.ಎಂ.ರಂಗನಾಥ, ವಿಧಾನ ಸೌಧ ಕಾರ್ಯಾಲಯದ ಕಾರ್ಯದರ್ಶಿ ಸಿ.ಟಿ.ಸುರೇಶ್ ಕುಮಾರ್, ದೇವಳದ ತಂತ್ರಿ ಪದ್ಮನಾಭ ಅತಿಥಿಗಳಾಗಿ ಭಾಗವಹಿಸಿದರು. ಜೀಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ,ಕಾರ್ಯಾಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಯು.ಎಂ.ಕಿಶೋರ್‌ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News