ಉತ್ತರ ಪ್ರದೇಶ ಸಿಎಂ ಆದಿತ್ಯನಾಥ ವಿರುದ್ದ ಅವಹೇಳನಕಾರಿ, ನಕಲಿ ಚಿತ್ರ

Update: 2017-03-21 13:18 GMT

ಸಾಗರ,ಮಾ.21: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಅಶ್ಲೀಲ ನಕಲಿ ಚಿತ್ರ ಹಾಕಿ, ಅವರ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕ್ರಮ ಜರಗಿಸುವಂತೆ ಒತ್ತಾಯಿಸಿ ಮಂಗಳವಾರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಗಾಂಧಿನಗರ ನಿವಾಸಿ ಗಣೇಶ್ ಗಟ್ಟಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗಣೇಶ್ ಗಟ್ಟಿ ಅವರ ದೂರಿನಲ್ಲಿ ಬೆಂಗಳೂರಿನ ಪ್ರಭಾ ಎನ್. ಬೆಲವಂಗಲ ಮತ್ತು ಬೆಂಗಳೂರು ರಣಧೀರ ಪಡೆಯ ಮಂಜು ಗಣಪತಿಪುರ ಎಂಬುವವರು ಆದಿತ್ಯನಾಥ ಅವರು ಯುವತಿಯೊಬ್ಬಳ ಜೊತೆ ಇರುವಂತೆ ಅಶ್ಲೀಲ ನಕಲಿ ಚಿತ್ರ ಮತ್ತು ಫೋಟೋವನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿರುತ್ತಾರೆ. ಇದರ ಜೊತೆಗೆ ಅಶ್ಲೀಲ ಮೆಸೇಜ್ ಸಹ ಹಾಕಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಗಳೂ, ಬಿಜೆಪಿಯ ರಾಷ್ಟ್ರೀಯ ಪ್ರಮುಖರೂ ಆಗಿರುವ ಯೋಗಿ ಆದಿತ್ಯನಾಥ್ ಅವರ ತೇಜೋವಧೆಗೆ ಪ್ರಯತ್ನಿಸಿರುವುದು ಅವರ ಅಭಿಮಾನಿಯಾದ ನನಗೂ ಹಾಗೂ ಪಕ್ಷದ ಕಾರ್ಯಕರ್ತರಿಗೂ ಮಾನಸಿಕ ನೋವು ಉಂಟಾಗಿರುತ್ತದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಆರೋಪಿಗಳು ಉದ್ದೇಶಪೂರ್ವಕವಾಗಿಯೆ ಆದಿತ್ಯನಾಥ ಅವರನ್ನು ಅವಮಾನಿಸುವ ಕೆಲಸವನ್ನು ಮಾಡಿರುವುದು ಸೈಬರ್ ಅಪರಾಧವಾಗಿರುತ್ತದೆ. ಈ ದಿನ ಸಾಗರ ನಗರದಲ್ಲಿ ನನ್ನ ಫೇಸ್‌ಬುಕ್ ಖಾತೆ ತೆರೆದು ನೋಡಿದಾಗ ಇದು ನನ್ನ ಗಮನಕ್ಕೆ ಬಂದಿದೆ. ಕೂಡಲೆ ಆರೋಪಿಗಳನ್ನು ಬಂಧಿಸಿ, ಕಾನೂನುಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಪ್ರಸನ್ನ ಕೆರೆಕೈ, ನಗರ ಅಧ್ಯಕ್ಷ ಶ್ರೀನಿವಾಸ್ ಆರ್., ಪ್ರಧಾನ ಕಾರ್ಯದರ್ಶಿ ಕೆ.ಆರ್. ಗಣೇಶಪ್ರಸಾದ್, ಬಿ.ಮೋಹನ್, ಅಶೋಕ ಬೇಳೂರು, ರಾಜು ಬಿ. ಮಡಿವಾಳ, ಕೆ.ವಿ. ಪ್ರವೀಣಕುಮಾರ್, ಆನಂದ ಭೀಮನೇರಿ, ಅರುಣ ಕುಗ್ವೆ, ಶ್ರೀಧ ಸಾಗರ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News