ಮೂಗಿಗೆ ತುಪ್ಪ ಸವರಿದ ಸರಕಾರ : ಬಜೆಟ್ ವಿರುದ್ಧ ಜೆಡಿಎಸ್ ಟೀಕೆ

Update: 2017-03-21 13:27 GMT

ಮಡಿಕೇರಿ ಮಾ.21 :ಸುಮಾರು ಒಂದು ಲಕ್ಷ ಕೋಟಿಗೂ ಮೀರಿದ ಬಜೆಟ್ ಮಂಡಿಸಿದ ರಾಜ್ಯ ಸರ್ಕಾರ ಕೊಡಗು ಜಿಲ್ಲೆಗೆ ಕೇವಲ 50 ಕೋಟಿ ರೂ. ಪ್ಯಾಕೇಜ್ ನಿಡುವ ಮೂಲಕ ಜಿಲ್ಲೆಯ ಜನರನ್ನು ಕಡೆಗಣಿಸಿದೆ ಎಂದು ಜಾತ್ಯಾತೀತ ಜನತಾದಳದ ಜಿಲ್ಲಾ ಘಟಕ ಟೀಕಿಸಿದೆ.

      ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾ ವಕ್ತಾರ ಪಿ.ಎಸ್. ಭರತ್ ಕುಮಾರ್, ರಾಜ್ಯ ಬಜೆಟ್ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಕೊಡಗಿನ ಜನರ ಮೂಗಿಗೆೆ ತುಪ್ಪ ಸವರುವ ಕಾರ್ಯ ಮಾಡಲಾಗಿದೆಯೆಂದು ಆರೋಪಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎರಡೂ ಬಜೆಟ್‌ಗಳು ಕೂಡ ಜನ ಸಾಮಾನ್ಯರಿಗೆ ವಿರುದ್ಧವಾಗಿದೆ. ಕಾಫಿ ಕ್ಷೇತ್ರದ ಸಂಕಷ್ಟ ಮತ್ತು ಬರ ಪರಿಸ್ಥಿತಿಯ ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ನೀಡಿಲ್ಲ. ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡುವ ನಿರೀಕ್ಷೆ ಇತ್ತಾದರು ಬಡ್ಡಿಯನ್ನು ಕೂಡ ಮನ್ನಾ ಮಾಡದ ರಾಜ್ಯ ಸರ್ಕಾರದ ಬಳಿ ಹಣ ಇಲ್ಲವೆನ್ನುವುದು ಸಾಬೀತಾಗಿದೆ ಎಂದು ಭರತ್ ಕುಮಾರ್ ಟೀಕಿಸಿದರು. ಪಕ್ಷ ಕಟ್ಟುವುದಕ್ಕಾಗಿ ಹಣ ಪೋಲಾಗುತ್ತಿದೆಯೆಂದು ಆರೋಪಿಸಿದರು

      ಕುಶಾಲನಗರ ಕಾವೇರಿ ತಾಲ್ಲೂಕು ರಚನೆ ಬೇಡಿಕೆಗೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಈ ಹಿಂದೆ ಹೆಚ್.ಡಿ.ಕುಮಾರ ಸ್ವಾಮಿಯವರು

ಮುಖ್ಯಮಂತ್ರಿಗಳಾಗಿದ್ದಾಗ ಕೊಡಗಿನ ಪೊನ್ನಂಪೇಟೆ, ನಾಪೋಕ್ಲು ಹಾಗೂ ಕುಶಾಲನಗರವನ್ನು ತಾಲ್ಲೂಕುಗಳನ್ನಾಗಿ ರಚನೆ ಮಾಡಬೇಕೆನ್ನುವ ಪ್ರಸ್ತಾವನೆ ಇತ್ತು. ಈ ಸರ್ಕಾರ ತಾಲ್ಲೂಕು ರಚನೆಗೆ ಬೆಂಬಲ ನೀಡದಿರುವುದರಿಂದ ಜೆಡಿಎಸ್ ವತಿಯಿಂದ ಮೂರು ತಾಲ್ಲೂಕುಗಳಿಗಾಗಿ ಹೋರಾಟ ನಡೆಸಲಾಗುವುದೆಂದರು.

      ಡಾ.ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪಕ್ಷಗಳು ಸಮಸ್ಯೆಗೆ ಪರಿಹಾರವನ್ನು ಸೂಚಿಸದೆ ಕೇವಲ ಪರಸ್ಪರ ಟೀಕೆಯಲ್ಲಿ ತೊಡಗಿವೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಕಾವೇರಿ ನೀರನ್ನು ರಾಜ್ಯ ಬಳಸುತ್ತಿರುವುದರಿಂದ ಕೊಡಗು ಜಿಲ್ಲೆಗೆ ವೈಜ್ಞಾನಿಕ ಆಧಾರದಲ್ಲಿ ಕೊಡಗಿಗೆ ಅನುದಾನ ಬಿಡುಗಡೆ ಮಾಡುವ ಅಗತ್ಯವಿದೆಯೆಂದು ಭರತ್ ಕುಮಾರ್ ಒತ್ತಾಯಿಸಿದರು.

ಪಕ್ಷದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಡಾ.ಯಾಲದಾಳು ಮನೋಜ್ ಬೋಪಯ್ಯ ಮಾತನಾಡಿ, ರಾಜ್ಯ ಸರ್ಕಾರದ ಬಜೆಟ್‌ನಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಿದ್ದು, ಕೊಡಗಿನ ಸಂಕಷ್ಟಕ್ಕೆ ಸ್ಪಂದಿಸದೆ ಇರುವುದು ಖಂಡನೀಯವೆಂದರು. ಕೊಡಗು ಜಿಲ್ಲೆ ಕರ್ನಾಟಕ ರಾಜ್ಯದ ಭೂಪಟದಲ್ಲಿ ಇದೇ ಎನ್ನುವುದನ್ನು ರಾಜ್ಯ ಸರ್ಕಾರ ಮರೆತಿದ್ದು, ಈ ಬೆಳವಣಿಗೆಗೆ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳೆ ಕಾರಣವೆಂದು ಆರೋಪಿಸಿದರು.

      ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೊಡಗಿನ ಜನರ ಬೆಂಬಲಕ್ಕಿಲ್ಲವೆಂದ ಅವರು, ಸರ್ಕಾರ ನಿದ್ರಾವಸ್ಥೆಯಲ್ಲಿದೆಯೆಂದು ಟೀಕಿಸಿದರು. ರಾಜ್ಯದಲ್ಲಿ ಬದಲಿ ಸರ್ಕಾರದ ಅಗತ್ಯವಿದ್ದು, ರೈತಪರ ಸರ್ಕಾರ ರಚನೆ ಜೆಡಿಎಸ್‌ನಿಂದ ಮಾತ್ರ ಸಾಧ್ಯವೆಂದು ಅಭಿಪ್ರಾಯಪಟ್ಟರು.

ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಮನ್ಸೂರ್ ಆಲಿ ಮಾತನಾಡಿ, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ದೊಡ್ಡ ಮೊತ್ತದ ಅನುದಾನ ನೀಡಿದಂತೆ ಪ್ರತಿಬಿಂಬಿಸಲಾಗಿದೆ. ಆದರೆ, ಇವುಗಳು ಅನುಷ್ಠಾನಗೊಳ್ಳುವುದು ಸಂಶಯಕ್ಕೆ ಕಾರಣವಾಗಿದ್ದು, ಶಾದಿ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಮಕ್ಕಳಾದರು ಅರ್ಹ ಸೌಲಭ್ಯ ದೊರಕುತ್ತಿಲ್ಲವೆಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸಿ.ಟಿ. ಮಾದಪ್ಪ, ನಗರ ಕಾರ್ಯದರ್ಶಿ ಮೊಹಮ್ಮದ್ ಅಬ್ರಾರ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ಜಿಲ್ಲಾಧ್ಯಕ್ಷರಾದ ಹೆಚ್.ಎಸ್. ಯೋಗೇಶ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News