ದಿಡ್ಡಳ್ಳಿ ಹೋರಾಟ : ಮಾ.25 ರಂದು ಬೃಹತ್ ಸಮಾವೇಶ

Update: 2017-03-21 13:32 GMT

ಮಡಿಕೇರಿ ಮಾ.21 :ರಾಜ್ಯ ಸರ್ಕಾರ ದಿಡ್ಡಳ್ಳಿಯಲ್ಲಿ ತಾತ್ಕಾಲಿಕವಾಗಿ ನೆಲೆ ನಿಂತಿರುವ ನಿರಾಶ್ರಿತರಿಗೆ ಇದೇ ಪ್ರದೇಶದಲ್ಲಿ ಶಾಶ್ವತ ನೆಲೆ ಕಲ್ಪಿಸುವ ಕುರಿತು ಭರವಸೆ ನೀಡಿದ್ದರೂ ಜಿಲ್ಲಾಡಳಿತ ಇಲ್ಲಿರುವವರನ್ನು ತರಾತುರಿಯಲ್ಲಿ ಒಕ್ಕಲೆಬ್ಬಿಸಲು ಯತ್ನಿಸುತ್ತಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆರೋಪಿಸಿದೆ. ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಮತ್ತು ಸರ್ಕಾರದ ಗಮನ ಸೆಳೆೆಯುವುದಕ್ಕಾಗಿ ಮಾ.25 ರಂದು ಮಡಿಕೆೇರಿಯ ಗಾಂಧಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಿತಿಯ ಪ್ರಮುಖರಾದ ಡಿ.ಎಸ್. ನಿರ್ವಾಣಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನ ಕಳೆದ ನಂತರ ಮಾ.27 ರಂದು ವಿಶೇಷ ಸಬೆ ಕರೆದು ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಅಲ್ಲದೆ, ದಿಡ್ಡಳ್ಳಿಯಲ್ಲಿರುವುದು ಸಿ ಮತ್ತು ಡಿ ವರ್ಗದ ಭೂಮಿ ಎಂಬುದಕ್ಕೆ ಸೂಕ್ತ ದಾಖಲೆ ನೀಡುವಂತೆ ತಿಳಿಸಿದ್ದರು. ಈ ದಾಖಲೆಗಳನ್ನು ನೀಡಲು ಸಮಿತಿಯು ತಯಾರಾಗಿದೆ. ಇಷ್ಟು ಬೆಳವಣಿಗೆಯ ಹಂತದಲ್ಲೆ ಜಿಲ್ಲಾಡಳಿತ ನಿರಾಶ್ರಿತರನ್ನು ಒಕ್ಕಲೆಬ್ಬಿಸಿ ಈಗಾಗಲೆ ಗುರುತಿಸಲಾಗಿರುವ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲ್ಲೂಕಿನ ಮೂರು ಪ್ರದೇಶಗಳಲ್ಲಿ ಗುರುತಿಸಲಾಗಿರುವ ಜಾಗದಲ್ಲಿ 20*30 ಅಡಿ ಅಳತೆಯ ನಿವೇಶನ ನೀಡುವುದಾಗಿ ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ಅರಣ್ಯ ಪ್ರದೇಶದಲ್ಲಿ ಹುಟ್ಟಿ ಬೆಳೆದು, ವಿಶಾಲ ಪರಿಸರದಲ್ಲಿ ಜೀವನ ನಡೆಸುವ ಬುಡಕಟ್ಟು ಜನರಿಗೆ ಇಷ್ಟು ಸಣ್ಣ ಅಳತೆಯ ನಿವೇಶನ ಸಾಕೇ ಎಂದು ನಿರ್ವಾಣಪ್ಪ ಪ್ರಶ್ನಿಸಿದರು.

ವಿವಿಧ ಇಲಾಖೆಗಳಿಂದ ಗಿರಿಜನ ಅಭ್ಯುದಯಕ್ಕಾಗಿ ಸಿಗುವ ಸೌಲಭ್ಯಗಳನ್ನು ಇಷ್ಟು ಸಣ್ಣ ನಿವೇಶನದಲ್ಲಿ ಸಾಕಾರಗೊಳಿಸಿಕೊಳ್ಳಲು ಹೇಗೆ ಸಾಧ್ಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಎಲ್ಲಾ ಕಾರಣಗಳಿಂದ ದಿಡ್ಡಳ್ಳಿಯಲ್ಲಿ ನೆಲೆ ನಿಂತವರು ಪುನರ್ವಸತಿ ಪ್ರದೇಶಕ್ಕೆ ತೆರಳಲು ಒಪ್ಪುತ್ತಿಲ್ಲ. ತಾತ್ಕಾಲಿಕ ಪ್ರದೇಶದಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ನೀಡಿರುವ 1 ಕೋಟಿ ರೂ.ವನ್ನು ಜಿಲ್ಲಾಡಳಿತ ಪುನರ್ವಸತಿ ಪ್ರದೇಶದಲ್ಲಿ ವಿನಿಯೋಗಿಸುತ್ತಿರುವುದು ಖಂಡನೀಯವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಸರ್ಕಾರದ ಹಾದಿ ತಪ್ಪಿಸುತ್ತಿದೆಯೆಂದು ಆರೋಪಿಸಿದ ನಿರ್ವಾಣಪ್ಪ ಬುಡಕಟ್ಟು ಜನರಿಗೆ ನಿವೇಶನ ನೀಡಲು ಸರ್ಕಾರ 5 ಕೋಟಿ ರೂ. ನೀಡಲು ಸಿದ್ಧವಿದೆಯೆಂದರು.

ಸಮಿತಿಯ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ದಿಡ್ಡಳ್ಳಿ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆ ಕಂದಾಯ ಇಲಾಖೆಗೆ ಮರಳಿಸದೆ ಇರುವುದರಿಂದ ಸಮಸ್ಯೆ ಉದ್ಭವವಾಗಿದೆಯೆಂದು ಟೀಕಿಸಿದರು. 2006 ರಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಸುಭೋದ್ ಯಾದವ್ ಅವರು, ಕಂದಾಯ ಇಲಾಖೆಗೆ ಸೇರಬೇಕಾದ ಜಾಗದ ಸರ್ವೆ ನಡೆಸಿ ಅರಣ್ಯ ಇಲಾಖೆಯಿಂದ ಮರಳಿ ಪಡೆಯಲು ಕ್ರಮ ಕೈಗೊಂಡಿದ್ದರು. ಆದರೆ, ಅವರನ್ನು ವರ್ಗಾವಣೆೆ ಮಾಡಲಾಯಿತೆಂದು ಬೇಸರ ವ್ಯಕ್ತಪಡಿಸಿದರು.ಜಾಗದ ವಿವಾದದ ಕುರಿತು ಅರಣ್ಯ ಇಲಾಖೆಯೊಂದಿಗೆ ಮುಖಾಮುಖಿ ಚರ್ಚೆಗೆ ಸಮಿತಿ ಸಿದ್ಧವಿದೆಯೆಂದು ಅಮಿನ್ ಮೊಹಿಸಿನ್ ಸ್ಪಷ್ಟಪಡಿಸಿದರು.

ಏ.7 ರಂದು ಕಾಲ್ನಡಿಗೆ ಜಾಥಾಕ್ಕೆ ಚಾಲನೆ

ಮಾರ್ಚ್ 25 ರಂದು ಮಡಿಕೇರಿಯಲ್ಲಿ ಬೃಹತ್ ಸಮಾವೇಶ ನಡೆಸಿ ವಿವಿಧ ಹಕ್ಕೊತ್ತಾಯಗಳಿಗಾಗಿ ಸರ್ಕಾರದ ಮುಂದೆ ಬೇಡಿಕೆಗಳನ್ನು ಇಡಲಾಗುವುದು. ಇದಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಏ.7 ರಂದು ಡಿಡ್ಡಳ್ಳಿಯಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥ ನಡೆಸಲಾಗುವುದೆಂದರು.

ಏ.14 ರಂದು ನಡೆಯುವ ಡಾ.ಅಂಬೇಡ್ಕರ್ ದಿನದಂದು ಬೆಂಗಳೂರಿಗೆ ತಲುಪುವ ರೀತಿಯಲ್ಲಿ 7 ದಿನಗಳ ಕಾಲ ಕಾಲ್ನಡಿಗೆ ಜಾಥ ನಡೆಯಲಿದೆಯೆಂದು ಅಮಿನ್ ಮೊಹಿಸಿನ್ ತಿಳಿಸಿದರು. ಏ.14 ರ ನಂತರ ಬೆಂಗಳೂರಿನಲ್ಲಿ ರಾಜ್ಯದ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಳ್ಳಲಿದೆ ಎಂದರು.

ಹಕ್ಕೊತ್ತಾಯಗಳು

2015ರ ಸರ್ಕಾರಿ ನಿರ್ದೇಶನದಂತೆ ಬಡವರ ಮನೆ ಹಾಗೂ ಜಮೀನನ್ನು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವುಗೊಳಿಸಬಾರದು, ಕೊಡಗಿನ ಎಲ್ಲಾ ಭೂಮಿ ವಸತಿ ರಹಿತರಿಗೆ ಬೇಸಾಯಕ್ಕೆ ಕನಿಷ್ಠ 3 ಏಕರೆ ಭೂಮಿ, ವಸತಿಗಾಗಿ 5 ಸೆಂಟ್ ಜಾಗ ನೀಡಬೇಕು, ದಿಡಳ್ಳಿ ಸಂತ್ರಸ್ತರಿಗೆ ಈ ಹಿಂದೆ ಇದ್ದ ಪ್ರದೇಶದಲ್ಲೆ ಭೂಮಿ ನೀಡಬೇಕು, ಪುನರ್ವಸತಿಗಾಗಿ ಅಧಿಕಾರಿಗಳು ಗುರುತಿಸಿರುವ ಭೂಮಿಯನ್ನು ಆಯಾ ಊರಿನ ನಿರಾಶ್ರಿತರಿಗೆ ನೀಡಬೇಕು, ಪಾಲೆಮಾಡು, ಚೆರಿಯಪರಂಬು, ಹಳ್ಳಿಗಟ್ಟು, ನಾತಂಗಾಲ, ದೇವರಕಾಡು ಮುಂತಾದ ಕಡೆ ನೆಲೆಸಿರುವ ಬಡವರಿಗೆ ಹಕ್ಕುಪತ್ರ ನೀಡಬೇಕು, ಆದಿವಾಸಿಗಳನ್ನು ಜೀತ ಮುಕ್ತಗೊಳಿಸಬೇಕು, ಜಿಲ್ಲಾಧಿಕಾರಿಗಳನ್ನು ತಕ್ಷಣ ವರ್ಗಾಯಿಸಬೇಕೆಂದು ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಅಬ್ದುಲ್ ಅಡ್ಕಾರ್, ಅಪ್ಪಾಜಿ, ಸ್ವಾಮಿ ಹಾಗೂ ರೈತ ಸಂಘದ ಎಸ್.ಆರ್. ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News