ಮೇಲ್ವಿಚಾರಕರಿಗೆ ಮೊಬೈಲ್ ನಿಷೇಧ

Update: 2017-03-21 17:34 GMT

ಶಿವಮೊಗ್ಗ, ಮಾ. 21: ಮಾಚ್ 30 ರಿಂದ ಆರಂಭವಾಗುವ 201617ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುವ ಕೊಠಡಿ ಮೇಲ್ವಿಚಾರಕರಿಗೂ ಮೊಬೈಲ್ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಲೋಕೇಶ್ ತಿಳಿಸಿದ್ದಾರೆ.


ಮಂಗಳವಾರ ತಮ್ಮ ಅಧ್ಯಕ್ಷತೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸೆಸೆಲ್ಸಿ ಪರೀಕ್ಷೆಗಳಲ್ಲಿ ನಡೆಯಬಹುದಾದ ಅಕ್ರಮಗಳನ್ನು ತಪ್ಪಿಸುವ ಉದ್ದೇಶದಿಂದ ಪರೀಕ್ಷೆಯ ಮೇಲ್ವಿಚಾರಕರಿಗೂ ಕೊಠಡಿಯ ಒಳಗೆ ಮೊಬೈಲ್ ನಿಷೇಧಿಸಲಾಗಿದೆ.ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.


ಪರೀಕ್ಷಾ ಕೇಂದ್ರಗಳಲ್ಲಿ ತುರ್ತು ಮಾಹಿತಿ ರವಾನೆ ಪರ್ಯಾಯ ಮಾರ್ಗ ಗಳನ್ನು ಅನುಸರಿಸಬೇಕು ಅಲ್ಲದೆ, ಮೊಬೈಲ್ ಹೊಂದಿರುವವರು ಪರೀಕ್ಷಾ ಕೇಂದ್ರದ ಹೊರಭಾಗದಲ್ಲಿ ಅಭ್ಯರ್ಥಿಗಳ ಮೊಬೈಲ್ ಅಥವಾ ಪುಸ್ತಕ ಬ್ಯಾಗ್‌ಗಳನ್ನು ಇಡಲು ಮಾಡಿರುವ ಜಾಗದಲ್ಲೇ ಬಿಟ್ಟುಹೋಗಬೇಕು ಎಂದರು.


ಪ್ರಸ್ತುತ ಎಸೆಸೆಲ್ಸಿ ಪರೀಕ್ಷೆ ಮಾಚ್ 30ರಿಂದ ಎಪ್ರಿಲ್ 12ರವರೆಗೆ ನಡೆಯುತ್ತಿದ್ದು ಜಿಲ್ಲೆಯ ಫಲಿತಾಂಶ ಪ್ರಮಾಣ ಹೆಚ್ಚಿಸಲು ಇನ್ನೂ ಒಂದು ಕಾಲ ಇದ್ದು ಇದನ್ನು ಶಿಕ್ಷಣ ಇಲಾಖೆ, ಶಿಕ್ಷಕರು ಪ್ರಯತ್ನಿ ಸಬೇಕು ಎಂದರು.
ಓದಿನಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗೆ ಕನಿಷ್ಠ ಪರೀಕ್ಷಾ ಮಾರ್ಗಸೂಚಿಗಳನ್ನು, ಹಾಗೂ ಪರೀಕ್ಷೆಯಲ್ಲಿ ಬರಬಹುದಾದ ಅತ್ಯಂತ ಪ್ರಮುಖ ಅಂಶಗಳ ಬಗ್ಗೆ ಕೊನೆಯ ಹಂತದ ಪ್ರಯತ್ನಗಳನ್ನು ಮಾಡಿಸುವ ಮೂಲಕ ಜಿಲ್ಲೆಯ ಫಲಿತಾಂಶ ಹೆಚ್ಚಿಸಬೇಕು ಎಂದು ಕಿವಿಮಾತು ಹೇಳಿದರು.


ಪರೀಕ್ಷಾ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಅಥವಾ ಉತ್ತರ ಪತ್ರಿಕೆಗಳ ಬಗ್ಗೆ ಯಾವುದೇ ಗೊಂದಲವಿಲ್ಲದಂತೆ ನಿರ್ವಹಿಸಬೇಕು.ನಿಯೋಜಿತ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯ ಇರಬೇಕು.ನಿಯೋಜಿತ ಅಧಿಕಾರಿಗಳು ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.


ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿನವ್ ಖರೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚಾದೋ ಸೇರಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News