​ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮ: ಸಚಿವ ರೈ

Update: 2017-03-21 17:35 GMT

ಮಡಿಕೇರಿ, ಮಾ.21: ಕೊಡಗು ಜಿಲ್ಲೆ ಯಲ್ಲಿ 274 ಕಿ.ಮೀ. ಉದ್ದದ ಅರಣ್ಯ ಸೀಮಾ ರೇಖೆಯಲ್ಲಿ ಕಾಡಾನೆಗಳು ಅರಣ್ಯದ ಅಂಚಿನಲ್ಲಿರುವ ತೋಟಗಳಿಗೆ ನುಗ್ಗುವುದನ್ನು ತಡೆಗಟ್ಟಲು ಅರಣ್ಯಾಧಿಕಾರಿಗಳು, ತಜ್ಞರು ಹಾಗೂ ನುರಿತ ಇಂಜಿನಿಯರ್‌ಗಳ ಮೂಲಕ ಸ್ಥಳ ಪರಿಶೀಲನೆ ನಡೆಸಿ ವಿವರವಾದ ಯೋಜನಾ ವರದಿ ತಯಾರಿಸಲಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದ್ದಾರೆ.


ವಿಧಾನಸಭೆ ಅಧಿವೇಶನಲ್ಲಿ ವೀರಾಜ ಪೇಟೆ ಶಾಸಕ ಕೆ.ಜಿ. ಬೋಪಯ್ಯ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸಚಿವರು, 274 ಕಿ.ಮೀ. ಉದ್ದದ ಅರಣ್ಯ ಸೀಮಾರೇಖೆಯಲ್ಲಿ 463 ಕಡೆಗಳಲ್ಲಿ ಕಾಡಾನೆಗಳು ಕಾಡಿನಿಂದ ಹೊರಗೆ ಬರುವ ಪ್ರದೇಶಗಳ ಅಂತರಗಳನ್ನು ಮುಚ್ಚಲು ವಿಶೇಷ ವಿನ್ಯಾಸದ ಕಾಮಗಾರಿ ಕೈಗೊಳ್ಳಲು 57 ಕೋಟಿ ರೂ., ಆನೆ ನಿರೋಧಕ ಕಂದಕಕ್ಕೆ ಕಲ್ಲಿನಿಂದ ಗೋಡೆ ನಿರ್ಮಿಸಿ ಭದ್ರಪಡಿಸಲು 227 ಕೋಟಿ ರೂ. ಮತ್ತು ಕುಶಾಲನಗರ ವಲಯದ ಮೀನುಕೊಲ್ಲಿ ಶಾಖೆಯ ಚಿಕ್ಲಿಹೊಳೆಯಿಂದ ಪೊನ್ನತ್ ಮೊಟ್ಟೆವರೆಗೆ 300 ಮೀಟರ್ ಸ್ಪೈಕ್ ಪಿಲ್ಲರ್ ನಿರ್ಮಾಣ ಮತ್ತು 4,400 ಮೀ. ಉಪಯೋಗಿತ ರೈಲು ಕಂಬಿ ಅಳವಡಿಸಿ ತಡೆ ನಿರ್ಮಾಣಕ್ಕೆ 6.05 ಕೋಟಿ ರೂ. ಯೋಜನೆ ತಯಾರಿಸಲಾಗಿದೆ ಎಂದರು.


ಕೊಡಗು ಜಿಲ್ಲೆಯಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷ ನಿಯಂತ್ರಣಕ್ಕಾಗಿ ತಯಾರಿಸಲಾದ ಯೋಜನೆಯಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲು ಹಾಗೂ ಮಾನವ-ಆನೆ ಸಂಘರ್ಷಕ್ಕೆ ಕಾರಣವಾಗಿರುವ ಐದು ಕಾಡಾನೆಗಳನ್ನು ಸೆರೆಹಿಡಿದು ಪುನರ್ವಸತಿಗೊಳಿಸಲು ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಗೆ 8.20 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ಆರ್ಥಿಕ ಸಾಲಿನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನುಡಿದರು. ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯನ್ನು ಶಾಶ್ವತವಾಗಿ ನಿಯಂತ್ರಿಸಲು ಕಂದಕ ತೆಗೆಯುವುದು. ಸೋಲಾರ್ ಬೇಲಿ ನಿರ್ಮಾಣ ಇತ್ಯಾದಿ ಯೋಜನೆಗಳನ್ನು ಕಾರ್ಯಗತಗೊಳಿಸಲು 2,76,00,000 ಲಕ್ಷ ರೂ.ಯಷ್ಟು ಅನುದಾನ ಕೋರಿ ಯೋಜನಾ ವರದಿಯನ್ನು ಇಲಾಖೆಯಿಂದ ಸಲ್ಲಿಸಿದ್ದರೂ ಇದುವರೆಗೆ ಯೋಜನೆಗೆ ಒಪ್ಪಿಗೆ ಮತ್ತು ಅನುದಾನ ಬಿಡುಗಡೆ ಮಾಡಿಲ್ಲ ಎಂದುಸಚಿವ ರಮಾನಾಥ ರೈ ಶಾಸಕರಿಗೆ ಮಾಹಿತಿ ನೀಡಿದರು.


ಹೈಲೈಟ್ಸ್
463 ಕಡೆ ಕಾಡಾನೆ ನುಸುಳುವ ಅಂತರ ಮುಚ್ಚಲು ವಿಶೇಷ ವಿನ್ಯಾಸದ ಕಾಮಗಾರಿ.
227 ಕೋಟಿ ರೂ. ವೆಚ್ಚದಲ್ಲಿ ಆನೆ ನಿರೋಧಕ ಕಂದಕ ನಿರ್ಮಾಣ.
ಚಿಕ್ಲಿಹೊಳೆಯಿಂದ ಪೊನ್ನತ್ ಮೊಟ್ಟೆವರೆಗೆ 300 ಮೀಟರ್ ಸ್ಪೈಕ್ ಪಿಲ್ಲರ್ ನಿರ್ಮಾಣ.
6.05 ಕೋಟಿ ರೂ. ವೆಚ್ಚದ 4,400 ಮೀ. ಉಪಯೋಗಿತ ರೈಲು ಕಂಬಿ ಅಳವಡಿಸಿ ತಡೆ ನಿರ್ಮಾಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News