ಚಿಕ್ಕಮಗಳೂರು: ಶಂಕಿತ ನಕ್ಸಲರಿಂದ ವ್ಯಕ್ತಿಯ ಅಪಹರಣ ವದಂತಿ

Update: 2017-03-21 17:43 GMT

ಚಿಕ್ಕಮಗಳೂರು, ಮಾ.21: ಕಳೆದ ಮೂರು ದಿನಗಳ ಹಿಂದೆ ಕುದುರೆಮುಖ ಭಾಗದಲ್ಲಿ ಶಂಕಿತ ನಕ್ಸಲರು ವ್ಯಕ್ತಿಯೋರ್ವರನ್ನು ಅಪಹರಿಸಿ ಬಿಡುಗಡೆಗೊಳಿಸಿದ್ದಾರೆ ಎಂಬ ವದಂತಿ ಹರಡಿ ಸ್ಥಳೀಯರು ಆತಂಕಕ್ಕೀಡಾದ ಘಟನೆ ನಡೆದಿದೆ.
ಕಳೆದ ಕೆಲದಿನಗಳಿಂದ ಕುದುರೆಮುಖ ಪರಿಸರದಲ್ಲಿ ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದರು. ಅಲ್ಲಿ ಅವರ ಬಟ್ಟೆ, ಪಾತ್ರೆಗಳು, ಡೇರೆಗಳು ಇತ್ತು ಎಂಬ ವದಂತಿ ಹರಡಿತ್ತು. ಇದರ ಬೆನ್ನಲ್ಲೇ ಮಂಗಳವಾರ ಸಂಸೆ ಪ್ರದೇಶದ ಓರ್ವರನ್ನು ಕಳೆದ ಶನಿವಾರ ನಕ್ಸಲರು ಅಪಹರಿಸಿ ನಂತರ ಬಿಡುಗಡೆಗೊಳಿಸಿದ್ದರು ಎಂಬ ಗಾಳಿ ಸುದ್ದಿ ಹರಡಿದ ಕಾರಣ ಸ್ಥಳೀಯರು ಮತ್ತಷ್ಟು ಆತಂಕಕ್ಕೀಡಾಗುವಂತೆ ಮಾಡಿತು.
ಕುದುರೆಮುಖ ಭಾಗದ ನೆಲ್ಲಿಬೀಡು, ಜಾಂಬ್ಲೆ, ಸಿಂಗ್ಸಾರ್, ಕೆಂಗನಗೊಂಡ ಮುಂತಾದ ಪ್ರದೇಶಗಳ ಗ್ರಾಮಸ್ಥರು ಭಯಭೀತರಾಗಿದ್ದರು. ಆದರೆ, ಈ ಬಗ್ಗೆ ಸ್ಥಳೀಯ ಕಳಸ ಮತ್ತು ಕುದುರೆಮುಖ ಭಾಗದ ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ‘ಈ ಪ್ರದೇಶದಲ್ಲಿ ಅಂತಹಾ ಯಾವುದೇ ಘಟನೆ ನಡೆದಿಲ್ಲ. ಇದು ವದಂತಿ ಮಾತ್ರ. ನಕ್ಸಲರ ಬಗ್ಗೆ ವದಂತಿ ಹರಡಿ ಅದರ ಲಾಭ ಪಡೆಯುವ ಮಂದಿಯ ಕುತಂತ್ರವಾಗಿರುವ ಸಾಧ್ಯತೆಗಳಿವೆ. ಇಂತಹ ವದಂತಿಗಳಿಗೆ ಸಾಮಾನ್ಯ ಜನರು ಭಯಪಡುವ ಅಗತ್ಯವಿಲ್ಲ’ ಎಂದು ನೆಲ್ಲಿಬೀಡು ಗ್ರಾಮಸ್ಥ ತೇಜಸ್ ಜೈನ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News