ಚಿಕ್ಕಮಗಳೂರು: ಏಪ್ರಿಲ್‌ನಲ್ಲಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2017-03-22 11:40 GMT

ಚಿಕ್ಕಮಗಳೂರು, ಮಾ.22:ಜಿಲ್ಲಾ ಬ್ಯಾರಿಗಳ ಒಕ್ಕೂಟದ ಸಹಯೋಗದಲ್ಲಿ ಮಂಗಳೂರಿನ ಅಲ್‌ವಫಾ ಪೌಂಡೇಶನ್ ಹಾಗೂ ಹಿದಾಯ ಪೌಂಡೇಶನ್ ವತಿಯಿಂದ ಚಿಕ್ಕಮಗಳೂರು ನಗರದಲ್ಲಿ ಮುಸ್ಲಿಂ ಸಮುದಾಯದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏಪ್ರಿಲ್ ನಲ್ಲಿ ಮಾಹೆಯಲ್ಲಿ ನಡೆಸಲು ನಗರದ ಬದ್ರಿಯಾ ಜುಮ್ಮಾ ಮಸೀದಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬ್ಯಾರಿಗಳ ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಯಿತು.

 ಈ ಸಂದರ್ಭದಲ್ಲಿ ಅಲ್ ವಫಾ ಪೌಂಡೇಶನ್‌ಗಳ ಅಧ್ಯಕ್ಷ ಜಿ.ಮೊಹಮ್ಮದ್ ಹನೀಫ್ ಮಾತನಾಡಿ, ಈತನಕ ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಈ ಬಾರಿ ಚಿಕ್ಕಮಗಳೂರಿನಲ್ಲಿ ಸುಮಾರು 15 ಜೋಡಿಗಳ ವಿವಾಹವನ್ನು ಬ್ಯಾರಿ ಒಕ್ಕೂಟದ ಸಹಯೋಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

 ಹಿದಾಯ ಪೌಂಡೇಶನ್ ಕಾರ್ಯದರ್ಶಿ ಅಬ್ದುಲ್ ರಝಾಕ್ ಅನಂತಾಡಿ ಮಾತನಾಡಿ, ಹಿದಾಯ ಪೌಂಡೇಶನ್ ವತಿಯಿಂದ ವಿಶೇಷ ಮಕ್ಕಳ ಪಾಲನಾ ಕೇಂದ್ರವನ್ನು ಬಂಟ್ವಾಳದ ಕಾವಳಕಟ್ಟೆಯಲ್ಲಿ ತೆರೆಯಲಾಗಿದೆ. ಬಡ ನಿರ್ಗತಿಕ ಕುಟುಂಬದ ಹಾಗೂ ಅಂಗವಿಕಲ ಮಕ್ಕಳು ಅಥವಾ ಅಂತಹ ಕುಟುಂಭಗಳಿಗೆ ಆಸರೆಯಾಗುವುದು ಈ ಪೌಂಡೇಶನ್‌ನ ಉದ್ದೇಶ ಎಂದು ಹೇಳಿದರು.

 ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಕೆ.ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಅಲ್ ವಫಾ ಪೌಂಡೇಶನ್ ಕಾರ್ಯದರ್ಶಿ ಯು.ಎಚ್.ಉಮರ್ ಸರಳ ಸಾಮೂಹಿಕ ವಿವಾಹ ಹಾಗೂ ಪೌಂಡೇಶನ್‌ನಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

 ಈ ಸಮಯದಲ್ಲಿ ಹಿದಾಯ ಪೌಂಡೇಶನ್ ಆಡಳಿತಾಧಿಕಾರಿ ಆಬೀದ್ ಅಝ್ಗರ್ ಸದಸ್ಯರಾದ ಪಿ.ಎಂ.ಬಶೀರ್, ಕೆ.ಎಸ್.ಅಬುಬಕ್ಕರ್, ಪಿ.ಮುಹಮ್ಮದ್, ಕರ್ನಾಟಕ ಬ್ಯಾರೀ ಸಾಹಿತ್ಯ ಅಕಾಡೆಮಿ ಸದಸ್ಯ ಕಿರುಗುಂದ ಅಬ್ಬಾಸ್, ಹಮೀದ್ ಗೋಳ್ತಮಜಲು, ಕೆ.ಇದ್ದಿನಬ್ಬ, ತಾಲೂಕು ಬ್ಯಾರೀ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಮಹಮ್ಮದ್, ನಾಸೀರ್ ಬಾಳೆಹೊನ್ನೂರ್, ಶರೀಫ್, ಸಿ.ಕೆ.ಇಬ್ರಾಹೀಂ, ಅಕ್ರಂ ಹಾಜಿ, ಬದ್ರಿಯಾ ಮಹಮ್ಮದ್, ಒಕ್ಕೂಟದ ಉಪಾಧ್ಯಕ್ಷ ಹಾಜಬ್ಬ, ಕಾರ್ಯದರ್ಶಿ ಬದ್ರುದ್ದೀನ್, ನಿವೃತ್ತ ಆರೋಗ್ಯ ನಿರೀಕ್ಷಕ ಹುಸೈನ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News