ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ

Update: 2017-03-22 11:54 GMT

ತುಮಕೂರು.ಮಾ.22:ಕಾಯಿ ಕೀಳಿಸುವಾಗ ಪಕ್ಕದ ಹೊಲಕ್ಕೆ ಬಿದಿದ್ದ ತೆಂಗಿನ ಕಾಯಿಗಳನ್ನು ಹಾಯ್ದುಕೊಳ್ಳುತಿದ್ದ ವ್ಯಕ್ತಿಯನ್ನು ಕುಡುಗೋಲಿನಿಂದ ಕಡಿದು ಕೊಲೆ ಮಾಡಿದ್ದ ಆರೋಪಿಗೆ ತುಮಕೂರಿನ ಆರನೇ ಅಧಿಕ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

 ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ರಾಮಲಿಂಗಾಪುರ ಗ್ರಾಮದ ಮೃತ ನಚಿಜುಂಡಪ್ಪ ಮತ್ತು ಆರೋಪಿ ವಿಜಯ್‌ಕುಮಾರ್ ಎಂಬುವವರ ಹೊಲಗಳು ಅಕ್ಕಪಕ್ಕದಲ್ಲಿಯೇ ಇಬ್ಬರ ಜಮೀನು ಕೂಡು ಬದುವನ್ನು ಹೊಂದಿದೆ.2015ರ ಜನವರಿ 5 ರಂದು ಮೃತ ನಚಿಜುಂಡಪ್ಪ ತಮ್ಮ ಜಮೀನಿನಲ್ಲಿದ್ದ ತೆಂಗಿನ ಮರದಿಂದ ತೆಂಗಿನ ಕಾಯಿ ಕೀಳಿಸುತ್ತಿದ್ದು,ಪಕ್ಕದ ವಿಜಯಕುಮಾರ್ ಅವರ ಹೊಲಕ್ಕೆ ಬಿದ್ದಿದ್ದ ತಂಗಿನ ಕಾಯಿಗಳನ್ನು ಆಯ್ದುಕೊಳ್ಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿ ವಿಜಯಕುಮಾರ್ ನನ್ನ ಹೊಲದಲ್ಲಿರುವ ತೆಂಗಿನ ಕಾಯಿಗಳನ್ನು ಏಕೆ ಆರಿಸುತ್ತಿದ್ದೀಯ ಎಂದು ಜಗಳ ತೆಗೆದು ಕುಡುಗೋಲಿನಿಂದ ನಚಿಜುಂಡಪ್ಪನ ಕುತ್ತಿಗೆ ಹೊಡೆದ ಪರಿಣಾಮ ತೀವ್ರ ರಕ್ತಶ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಸಂಬಂಧ ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖಾಧಿಕಾರಿ ಕೆ.ಜಿ.ರಾಮಕೃಷ್ಣ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು.

ಸದರಿ ಕೇಸಿನ ವಿಚಾರಣೆ ನಡೆಸಿದ 6ನೇ ಅಧಿಕ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ವೆಂಕಟೇಶ್ ಅವರು, ಆರೋಪಿ ವಿಜಯಕುಮಾರ್‌ಗೆ ಐಪಿಸಿ ಕಲಂ 302ರ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿದಿಸಿದ್ದು, ದಂಡವನ್ನು ಮೃತರ ಪತ್ನಿಗೆ ಪರಿಹಾರ ರೂಪದಲ್ಲಿ ವಿತರಿಸುವಂತೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News