ರಿಯಾಝ್ ಮುಸ್ಲಿಯಾರ್ ಹತ್ಯೆಗೆ ಖಂಡನೆ : ಪಿಎಫ್‌ಐ ಪ್ರತಿಭಟನೆ

Update: 2017-03-22 12:56 GMT

ಮಡಿಕೇರಿ,ಮಾ.22 :ಕಾಸರಗೋಡಿನ ಚೂರಿ ಎಂಬಲ್ಲಿ ಕೊಡಗಿನ ಕೊಟ್ಟಮುಡಿಯ ಮೂಲದವರಾದ ರಿಯಾಝ್ ಮುಸ್ಲಿಯಾರ್ ಎಂಬುವವರನ್ನು ಹತ್ಯೆ ಮಾಡಿದ ಪ್ರಕರಣವನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರಮುಖರು ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಜಿಲ್ಲಾಡಳಿತದ ಭವನಕ್ಕೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕೊಟ್ಟಮುಡಿ ನಿವಾಸಿಯಾಗಿರುವ ರಿಯಾಝ್ ಮುಸ್ಲಿಯಾರ್(28)ಅವರು ಕಾಸರಗೋಡು ಜಿಲ್ಲೆಯ ಚೂರಿ ಎಂಬಲ್ಲಿನ ಮಸೀದಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾ.20ರ ರಾತ್ರಿ ಮಸೀದಿಗೆ ನುಗ್ಗಿ ಅವರನ್ನು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಈ ಹಿಂದೆಯೂ ಅಲ್ಲಿನ ಮತಾಂಧ ಶಕ್ತಿಗಳ ಕೃತ್ಯಕ್ಕೆ ಹಲವಾರು ಮಂದಿ ಮುಸ್ಲಿಂ ಯುವಕರು ಬಲಿಯಾಗಿದ್ದು, ಇದು ಅಲ್ಲಿನ ಫ್ಯಾಸಿಸ್ಟ್ ಶಕ್ತಿಗಳ ಅಟ್ಟಹಾಸಕ್ಕೆ ಉದಾಹರಣೆಯಾಗಿದೆ ಎಂದು ಪ್ರಮುಖರು ಆರೋಪಿಸಿದರು.

ಕೇರಳದ ವಿವಿಧ ಮದರಸಗಳಲ್ಲಿ ಕೊಡಗು ಜಿಲ್ಲೆಯ ಹಲವಾರು ಮಂದಿ ಕಾರ್ಯನಿರ್ವಹಿಸುತ್ತಿದ್ದು, ಮಾ.20ರಂದು ನಡೆದ ಘಟನೆಯಯಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಯಾರ್ ವರ್ಗದವರು ಭಯಭೀತರಾಗಿದ್ದಾರೆ. ಆದುದರಿಂದ ರಿಯಾಝ್ ಮುಸ್ಲಿಯಾರ್ ಅವರನ್ನು ಕೊಲೆ ಮಾಡಿದ ಮತಾಂಧ ಶಕ್ತಿಗಳನ್ನು ಕೂಡಲೇ ಬಂಧಿಸಿ, ಅತ್ಯಂತ ಬಡತನದಿಂದ ಜೀವನ ಸಾಗಿಸುತ್ತಿರುವ ಮುಸ್ಲಿಯಾರ್ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

 ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗಿನ ಮುಸ್ಲಿಂ ಜನಾಂಗಕ್ಕೆ ಸೂಕ್ತ ರಕ್ಷಣೆಯ ಅಗತ್ಯವಿದೆ ಎಂದರು.

ಸಂಘಟನೆಯ ಜಿಲ್ಲಾಧ್ಯಕ್ಷ ಟಿ.ಎ.ಹಾರಿಸ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ನಗರಾಧ್ಯಕ್ಷ ನೂರುದ್ದೀನ್, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಡಿ.ಎಸ್. ನಿರ್ವಾಣಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News