ನಕಲಿ ದಾಖಲೆ ಆರೋಪದಡಿ 15 ಪ್ರಕರಣ ದಾಖಲು: ದಯಾನಂದ್

Update: 2017-03-22 13:13 GMT

ಚಿಕ್ಕಮಗಳೂರು, ಮಾ.21: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಗಳನ್ನು ನಡೆಸದೆ ಇದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನುದಾನ ಪಡೆದ ಆರೋಪದ ಅಡಿಯಲ್ಲಿ 15 ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯನಂದ್ ತಿಳಿಸಿದ್ದಾರೆ.

 ಅವರು ಬುಧವಾರ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಂಘ, ಸಂಸ್ಥೆಗಳಿಗೆ ಅನುದಾನ ನೀಡಲು ಕಾನೂನು ಹಾಗೂ ಮಾರ್ಗಸೂಚಿಗಳನ್ನು ಇಲಾಖೆ ಅಳವಡಿಸಿಕೊಂಡಿದೆ. ಸಮರ್ಪಕ ದಾಖಲೆಗಳು ಇದ್ದಲ್ಲಿ ಅನುದಾನ ನೀಡಲಾಗುತ್ತದೆ. ಯಾವುದೇ ರೀತಿಯ ಕಾರ್ಯಕ್ರಮ ನಡೆಸಿದರೂ ಅನುದಾನ ನೀಡುವಾಗ ಪರಿಶೀಲನೆ ನಡೆಸಲಾಗುತ್ತದೆ. ನಕಲಿ ಎಂದು ಕಂಡು ಬರುವ ದಾಖಲೆಗಳನ್ನು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವುದಾಗಿ ನುಡಿದರು.

 ಕೆಲವರು ಕಾರ್ಯಕ್ರಮ ನಡೆಸದೆ ಸುಳ್ಳು ಛಾಯಚಿತ್ರ, ಪತ್ರಿಕಾ ವರದಿ ತುಣುಕು ಸೇರಿದಂತೆ ಇತರೆ ನಕಲಿ ದಾಖಲೆಗಳನ್ನು ಸಲ್ಲಿಸಿ ಅನುದಾನ ಪಡೆದಿರುವುದೂ ರಾಜ್ಯದ ವಿವಿಧ ಕಡೆಗಳಲ್ಲಿ ಬೆಳಕಿಗೆ ಬಂದಿದೆ. ಇವುಗಳನ್ನು ಪತ್ತೆ ಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರರ ವಹಿಸಲಾಗಿದೆಎಂದು ತಿಳಿಸಿದ್ದಾರೆ.

ಕಾರ್ಯಕ್ರಮ ನಡೆಸಿದವರಿಗೆ ಅಂತರ್ಜಾಲದ ಮೂಲಕವೇ ಹಣ ಪಾವತಿ ಆಗುತ್ತದೆ. ತಿರಸ್ಕಾರ ಆಗಿರುವುದಕ್ಕೂ ಕಾರಣ ನೀಡಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ವ್ಯವಹಾರಗಳೂ ಕೂಡ ಪಾರದರ್ಶಕವಾಗಿರುವುದರಿಂದ ಸಂಶಯಗಳಿಗೆ ಅವಕಾಶ ಇಲ್ಲವೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News