4ನೆ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಧರಣಿ : ಅಸ್ವಸ್ಥಗೊಂಡರೂ ನಿಲ್ಲದ ಮಾನಿನಿಯರ ಕೂಗು

Update: 2017-03-22 14:14 GMT

ಬೆಂಗಳೂರು, ಮಾ.22: ವೇತನ ಹೆಚ್ಚಳ ಸೇರಿ ಇನ್ನಿತರೆ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ನೌಕರರು ನಡೆಸುತ್ತಿರುವ ಧರಣಿ ಇಂದಿಗೆ ನಾಲ್ಕನೆ ದಿನಕ್ಕೆ ಕಾಲಿಟ್ಟಿದ್ದು, ಬಿರು ಬಿಸಿಲಿನಲ್ಲಿ ಗಂಟೆಗಟ್ಟಲೆ ಕುಳಿತು ತಾಪಕ್ಕೆ ಮಾನಿನಿಯರು ಅಸ್ವಸ್ಥಗೊಂಡಿದ್ದರೂ, ಧರಣಿ ಹಿಂದಕ್ಕೆ ತೆಗೆದುಕೊಳ್ಳಲು ನಿರ್ಧರಿಸಿಲ್ಲ.

ಸೋಮವಾರದಿಂದ ಆರಂಭಗೊಂಡಿರುವ ಅಹೋರಾತ್ರಿ ಧರಣಿ, ಮೂರು ರಾತ್ರಿಗಳನ್ನು ಪೂರೈಸಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರು ರಸ್ತೆಯಲ್ಲಿ ಮಲಗಿ ತಮ್ಮ ಬೇಡಿಕೆಗಳ ಈಡೇರಿಕೆ ಪಟ್ಟು ಹಿಡಿದಿದ್ದಾರೆ. ಧರಣಿಯಲ್ಲಿ ಗರ್ಭೀಣಿ ಮಹಿಳೆಯರು, ಹತ್ತು ವರ್ಷಕ್ಕಿಂತ ಕಡಿಮೆ ವಯೋಮಿತಿಯ ನೂರಾರು ಚಿಕ್ಕ ಮಕ್ಕಳಿದ್ದಾರೆ.

ಪ್ರತಿಭಟನೆಯಲ್ಲಿ ಸಕ್ರಿಯವಾಗಿದ್ದ ನೌಕರರಲ್ಲಿ 18ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಗರದ ಕೆಸಿ ಜನರಲ್‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಅಸ್ವಸ್ಥಗೊಂಡಿದ್ದ ಮಂಡ್ಯದ ಅಂಗನವಾಡಿ ಕಾರ್ಯಕರ್ತೆ ವಿಜಯಾ ಸೇರಿ ಐವರು ಆಸ್ಪತ್ರೆಯಿಂದ ನೇರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕರ್ತರಿಗೆ ಮತ್ತಷ್ಟು ಧೈರ್ಯ ತುಂಬಿದರು.

ಸೊಳ್ಳೆಕಾಟ: ರಾತ್ರಿ ವೇಳೆ ರಸ್ತೆಯಲ್ಲಿ ಸೊಳ್ಳೆಗಳೇ ಹೆಚ್ಚಾಗಿ ಸದ್ದು ಮಾಡುತ್ತಿವೆ. ಬಿಬಿಎಂಪಿ ನೀರು ಮತ್ತು ಶೌಚಕ್ಕೆ ಮಾತ್ರ ಸೌಲಭ್ಯ ಒದಗಿಸಿದೆ. ಆದರೆ, ಇಲ್ಲಿರುವ ಸೊಳ್ಳೆಗಳಿಂದ ಮಾರಣಾಂತಿಕ ಕಾಯಿಲೆ, ಜ್ವರ ಬರಬಹುದು ಎನ್ನುವ ಆತಂಕ ನಮ್ಮಲ್ಲಿದೆ ಎಂದು ಅಂಗನವಾಡಿ ಸಹಾಯಕಿಯೊಬ್ಬರು ರಾತ್ರಿ ಪ್ರತಿಭಟನೆಯನ್ನುದ್ದೇಶಿಸಿ ಹೇಳಿದರು.

ಸಭೆಗೆ ಕರೆದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ಸಂಜೆ ಮತ್ತೊಮ್ಮೆ ಸಭೆ ಕರೆದಿದ್ದಾರೆ ಎನ್ನುವುದು ಸುಳ್ಳು ಮಾಹಿತಿ. ಅಲ್ಲದೆ, ಅಂಗನವಾಡಿ ನೌಕರರ ಸಂಘದ ಮುಖಂಡರನ್ನು ಯಾರೂ ಮಾತುಕತೆಗೆ ಕರೆದಿಲ್ಲ. ಒಂದು ವೇಳೆ ಆಹ್ವಾನಿಸಿದರೆ ಹೋಗುತ್ತೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದ ಪತ್ರಿಕೆಗೆ ತಿಳಿಸಿದರು.

ಹೆಚ್ಚಿದ ಬಲ: ಪ್ರತಿಭಟನೆಯನ್ನು ಬೆಂಬಲಿಸಿ ಹತ್ತಾರು ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದರೆ, ಮತ್ತೊಂದು ಕಡೆ ಕೋಲಾರ, ಚಿಕ್ಕಬಳ್ಳಾಪುರ, ಹೊಸಕೋಟೆ, ರಾಮನಗರ, ಚಿತ್ರದುರ್ಗ, ಮೈಸೂರು, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಬಲ ತುಂಬಿದರು.

ನಕಲಿ ಪತ್ರಕರ್ತ ಪೊಲೀಸರ ವಶಕ್ಕೆ ಪತ್ರಕರ್ತ ಎಂದು ನೆಪ ಮಾಡಿಕೊಂಡು ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆಯರ ಬಳಿ ಹೋಗಿ, ಮೊಬೈಲ್ ನಂಬರ್, ಫೋಟೋ ತೆಗೆದುಕೊಳ್ಳುತ್ತಿದ್ದ ಆರೋಪದ ಮೇಲೆ ನಕಲಿ ಪತ್ರಕರ್ತನೊಬ್ಬನನ್ನು ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೆಪಿ ನಗರ ನಿವಾಸಿ ಮುರಳಿ(39) ಎಂಬಾತ ನಕಲಿ ಪತ್ರಕರ್ತನಾಗಿದ್ದು, ಬುಧವಾರ ಬೆಳಗ್ಗೆ ಪ್ರತಿಭಟನಾ ಸ್ಥಳಕ್ಕೆ ತೆರಳಿ ತಾನು ಪತ್ರಿಕೆಯೊಂದರ ವರದಿಗಾರ ಎಂದು ಹೇಳಿಕೊಂಡಿದ್ದ. ಬಳಿಕ ನಿಮ್ಮ ವಿಳಾಸ, ಮೊಬೈಲ್ ನಂಬರ್ ನೀಡಿ ಎಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಪತ್ರಕರ್ತನ ಗಮನಿಸಿದ ಕೆಲ ಕಾರ್ಯಕರ್ತರು ಅನುಮಾನಗೊಂಡು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಒಂದೊಂದು ಪತ್ರಿಕೆಗಳ ಹೆಸರನ್ನು ಹೇಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಪ್ಪಾರಪೇಟೆ ಠಾಣೆ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಆತನ ಬಳಿ ಯಾವುದೇ ಪತ್ರಕರ್ತರ ಗುರುತಿನ ಚೀಟಿ ಇರದಿರುವುದು ಗೊತ್ತಾಗಿದೆ. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News