ಬಿಸಿಲ ಝಳಕ್ಕೆ ಮಲೆನಾಡಿಗರು ತತ್ತರ ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ

Update: 2017-03-22 17:27 GMT

ಶಿವಮೊಗ್ಗ, ಮಾ.22: ಪ್ರಸ್ತುತ ಬೇಸಿಗೆ ಮಲೆನಾಡಿಗರ ಪಾಲಿಗೆ ಅಕ್ಷರಶಃ ಕರಾಳವಾಗಿ ಪರಿಣಮಿಸಲಾರಂಭಿಸಿದೆ.ರಣಬಿಸಿಲಿನ ಹೊಡೆತಕ್ಕೆ ಮಲೆನಾಡಿಗರು ತತ್ತರಿಸುವಂತಾಗಿದೆ. ಸುಡು ಬಿಸಿಲಿಗೆ ಹೆಸರುವಾಸಿಯಾದ ಬಯಲು ಸೀಮೆಯ ಪ್ರದೇಶಗಳನ್ನು ಮೀರಿಸುವ ರೀತಿಯಲ್ಲಿ ಮಲೆನಾಡಿನಲ್ಲಿ ತಾಪಮಾನ ದಾಖಲಾಗುತ್ತಿದೆ.


ಕಳೆದ ಮುಂಗಾರು ಅವಧಿಯಲ್ಲಿ ಮಲೆನಾಡಿನಾದ್ಯಂತ ವಾಡಿಕೆಯ ಮಳೆಯೂ ಆಗಿಲ್ಲ. ಈ ನಡುವೆ ಚಳಿಗಾಲದಿಂದಲೇ ತಾಪಮಾನದಲ್ಲಿ ಹೆಚ್ಚಳ ಕಂಡುಬರಲಾರಂಭಿಸಿತ್ತು. ಇದರಿಂದ ಬೇಸಿಗೆಯ ಎರಡು ತಿಂಗಳಲ್ಲಿಯೇ ಜಿಲ್ಲೆಯಾದ್ಯಂತ ಬಹುತೇಕ ಕೆರೆಕಟ್ಟೆಗಳು, ನದಿತೊರೆಗಳು ನೀರಿಲ್ಲದೆ ಬರಿದಾಗುವ ಹಂತದಲ್ಲಿವೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮತ್ತೊಂದೆಡೆ ತಾಪಮಾನದಲ್ಲಿ ನಿರಂತರ ಹೆಚ್ಚಳದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಾರಂಭಿಸಿದೆ. ಈಗಾಗಲೇ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಜೀವ ಜಲಕ್ಕೆ ತತ್ವಾರ ಉಂಟಾಗಿದೆ. ಬಿಸಿಲ ಏರಿಕೆ, ನೀರಿನ ಕೊರತೆಯು ಮಲೆನಾಡಿಗರನ್ನು ಬೆಂಬಿಡದೆ ಕಾಡಲಾರಂಭಿಸಿದ್ದು, ಇತ್ತೀಚಿನ ವರ್ಷಗಳಲ್ಲಿಯೇ ಜಿಲ್ಲೆಯಲ್ಲಿ ಈ ರೀತಿಯ ಭೀಕರ ಬರದ ಸ್ಥಿತಿ ಎದುರಾಗಿರಲಿಲ್ಲ ಎನ್ನಲಾಗಿದೆ.

ಕಾದ ಕಾವಲಿ : ಶಿವಮೊಗ್ಗ ನಗರ ಸೇರಿದಂತೆ ಪಶ್ಚಿಮಘಟ್ಟ ವ್ಯಾಪಿಯ ತೀರ್ಥಹಳ್ಳಿ, ಹೊಸನಗರ, ಸಾಗರದಂತಹ ತಾಲೂಕುಗಳಲ್ಲಿಯೂ ತಾಪಮಾನದ ಪ್ರಮಾಣ ಏರುಗತಿಯಲ್ಲಿದೆ. ದಟ್ಟ ಅರಣ್ಯ ಹಾಗೂ ನದಿ-ತೊರೆಗಳ ಕಾರಣದಿಂದ ಸದಾ ತಂಪಾದ ಹವಾಗುಣಕ್ಕೆ ಹೆಸರಾಗಿದ್ದ ಮಲೆನಾಡು ಭಾಗಗಳಲ್ಲಿ ಬಿಸಿಲ ಪ್ರಖರತೆ ತೀವ್ರವಾಗಿರುವುದು ಸ್ಥಳೀಯರಲ್ಲಿ ಏದುಸಿರು ಬಿಡುವಂತೆ ಮಾಡಿದೆ. ಕಳೆದೊಂದು ತಿಂಗಳಿನಿಂದ ಜಿಲ್ಲೆಯಾದ್ಯಂತ ಉಷ್ಣಾಂಶ ಪ್ರಮಾಣದಲ್ಲಿ ದಿಢೀರ್ ಹೆಚ್ಚಳವಾಗಿದೆ. ಬೆಳಗ್ಗೆ 8 ಗಂಟೆಯಾಗುತ್ತಿದ್ದಂತೆ ಬಿಸಿಲಿನ ತೀವ್ರತೆ ಏರುತ್ತಿದ್ದು, ರಸ್ತೆಯಲ್ಲಿ ಓಡಾಡಲು ಆಗದಷ್ಟು ಬಿಸಿಲು ಬೀಳುತ್ತಿರುತ್ತದೆ. ಶಿವಮೊಗ್ಗ ನಗರದ ಡಾಂಬರು ರಸ್ತೆಗಳಲ್ಲಿ ಚಪ್ಪಲಿ, ಶೂ ಇಲ್ಲದೆ ಓಡಾಡಲು ಸಾಧ್ಯವಾಗದ ಮಟ್ಟಿಗೆ ಬಿಸಿಲಿನ ಝಳ ಇರುತ್ತದೆೆ.

ಪರಿಸರ ನಾಶ: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅವ್ಯಾಹತ ಪ್ರಮಾಣದಲ್ಲಿ ಪರಿಸರ ನಾಶವಾಗುತ್ತಿದೆ. ಸಾವಿರಾರು ಮರಗಳನ್ನು ಬಲಿ ಕೊಡಲಾಗುತ್ತಿದೆ. ಇದರಿಂದ ಮಲೆನಾಡಿನ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸುತ್ತಾರೆ. 35 ರಿಂದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ!

      ನಗರದಲ್ಲಿ ಇತ್ತೀಚೆಗೆ 35 ರಿಂದ 40 ಡಿಗ್ರಿಯವರೆಗೂ ಗರಿಷ್ಠ ತಾಪಮಾನ ದಾಖಲಾಗಿದೆ! ಇತ್ತೀಚಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಧಿಕ ತಾಪಮಾನವಾಗಿದೆ. ಈ ಹಿಂದೆ ಶಿವಮೊಗ್ಗದಲ್ಲಿ ಗರಿಷ್ಠ ತಾಪಮಾನವು 30 ರಿಂದ 35 ಡಿಗ್ರಿ ಸೆಲ್ಸಿಯಸ್‌ನೊಳಗೆ ಇರುತ್ತಿತ್ತು. ಆದರೆ ಪ್ರಸ್ತುತ ವರ್ಷ 40 ಡಿಗ್ರಿಯ ಆಸುಪಾಸಿನವರೆಗೂ ಉಷ್ಣಾಂಶ ದಾಖಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News