ಅಂಗನವಾಡಿ ನೌಕರರ ಪ್ರತಿಭಟನೆ ವಾಪಸ್

Update: 2017-03-23 15:05 GMT

ಬೆಂಗಳೂರು, ಮಾ.23: ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ನಡೆಸಿದ ಎರಡನೆ ಸಂಧಾನ ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ವಾಪಸ್ ಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮೀ ಘೋಷಿಸಿದ್ದಾರೆ.

ಗುರುವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಸಚಿವೆ ಉಮಾಶ್ರೀ ಅವರೊಂದಿಗೆ ನಡೆದ ಸಭೆಯೂ ಯಶಸ್ವಿಯಾಗಿದ್ದು, ಎ.10ರಂದು ಸಭೆ ನಡೆಯಲಿದೆ. ಹೀಗಾಗಿ, ಪ್ರತಿಭಟನೆ ವಾಪಸ್ ಪಡೆಯಲಾಗಿದೆ. ನಿಮಗೆಲ್ಲಾ ಒಪ್ಪಿಗೆ ಇದೆಯಾ ಎಂದು ಪ್ರತಿಭಟನಾನಿರತ ನೌಕರರನ್ನು ಪ್ರಶ್ನಿಸಿದಾಗ, ಸರಿ ಎಂದು ಒಗ್ಗಟ್ಟಿನಿಂದ ಕೂಗಿ ಚಪ್ಪಾಳೆ ತಟ್ಟಿದರು.

ತಾತ್ಕಾಲಿಕವಾಗಿ ನಮ್ಮ ಪ್ರತಿಭಟನೆ ವಾಪಸ್ ಪಡೆಯಲಾಗಿದೆ ಎಂದ ಅವರು, ಸಿಎಂ ಸಿದ್ದರಾಮಯ್ಯ ಅವರೊಂದಿಗೆ 2ಗಂಟೆ ಕಾಲ ಸಭೆ ನಡೆದಿದ್ದು, ಅಂಗನವಾಡಿ ನೌಕರರ ಗೌರವ ಧನ ಹೆಚ್ಚಿಸುವ ಬಗ್ಗೆ ರಾಜ್ಯ ಸರಕಾರ ಭರವಸೆ ನೀಡಿದೆ. ಅಲ್ಲದೆ, ಬಳಿಕ ಬೇಡಿಕೆ ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ಅವರ ಮನೆಗೆ ಮುತ್ತಿಗೆ ಹಾಕಲಾಗುವುದೆಂದು ವರಲಕ್ಷ್ಮೀ ಎಚ್ಚರಿಕೆ ನೀಡಿದರು.

ಬೆಳಗ್ಗೆ ಹೊರಟ ನೌಕರರು:

ರಾತ್ರಿ 8 ಗಂಟೆಗೆ ಪ್ರತಿಭಟನೆ ವಾಪಸ್ ಪಡೆಯಲಾಗಿದೆ ಎಂದು ಘೋಷಣೆ ಮಾಡಿದ ಕಾರಣ, ಸಾವಿರಾರು ನೌಕರರು ಬೆಳಗ್ಗೆ ತಮ್ಮ ಊರಿಗೆ ಹೋಗಲು ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಕೆಆರ್ ಮಾರುಕಟ್ಟೆ ಕಡೆ ಸಾಗಿದರು.

ಮತ್ತೆ ಬರುತ್ತೇವೆ:

ಎ.10 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆಯುವ ಸಭೆಯು ಮಹತ್ವದ್ದಾಗಿದ್ದು, ತಮ್ಮ ಬೇಡಿಕೆ ಈಡೇರಿಸಲು ಸರಕಾರ ಮುಂದಾಗಿಲ್ಲ ಎಂದರೆ, ನಾವು ಮತ್ತೆ ಬರುತ್ತೇವೆ ಎಂದು ನೌಕರರ ಸಂಘದ ಮುಖಂಡರು ಹೇಳಿದರು.
ಪ್ರತಿಭಟನೆ ಹಿನ್ನೆಲೆ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾ.20ರಿಂದ ಅಹೋರಾತ್ರಿ ಧರಣಿ ಗುರುವಾರಕ್ಕೆ ನಾಲ್ಕನೆ ದಿನಕ್ಕೆ ಕಾಲಿಟ್ಟಿತ್ತು. ರಾಜ್ಯ ಸರಕಾರ ಎರಡು ದಿನದ ಹಿಂದೆ ಸಭೆ ಕರೆದು, ಎ.19ರಂದು ಮಾತುಕತೆ ನಡೆಸುವುದಾಗಿ ತಿಳಿಸಿತ್ತು. ಆದರೆ, ಪಟ್ಟುಬಿಡದ ನೌಕರರು, ಪ್ರತಿಭಟನೆ ಮುಂದುವರೆಸಿದ್ದರು. ಬಳಿಕ ಸರಕಾರದೊಂದಿಗೆ ನಡೆದ ಸಂಧಾನ ಸಭೆ ಯಶಸ್ವಿಯಾದ ಕಾರಣ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಬಂದ ಸಚಿವೆ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ, ಗುರುವಾರ ಸಂಜೆ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿ, ನಿಮ್ಮೆಂದಿಗೆ ಸರಕಾರ ಇದೆ. ಯಾರು ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ನಾವು ಬದ್ಧ ಎಂದು ಹೇಳಿದರು.

ಸರಕಾರ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಅಲ್ಲದೆ, ಚಿಕ್ಕಮಕ್ಕಳ ಜವಾಬ್ದಾರಿ ಪಡೆಯುವ ಮತ್ತು ಶಿಕ್ಷಣ ನೀಡುವ ಇವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
- ಸಾಲು ಮರದ ತಿಮ್ಮಕ್ಕ

ಅಂಗನವಾಡಿ ನೌಕರರ ಪ್ರತಿಭಟನೆಯು ರಾಷ್ಟ್ರವ್ಯಾಪ್ತಿ ಸುದ್ದಿಯಾಗಿದೆ. ಮಹಿಳೆಯರಿಗೆ ಸಮಾನತೆ ದೊರೆಯುವ ಸಮಾಜ ನಿರ್ಮಾಣವಾಗಬೇಕು. ಅಲ್ಲದೆ, ಕನಿಷ್ಠ 10 ಸಾವಿರ ರೂ. ವೇತನ ನೀಡಲು ಸರಕಾರ ಮುಂದಾಗಬೇಕು. ಇವರೆಲ್ಲಾ ಬಡವರಲ್ಲ, ದುಡಿಯುವ ವರ್ಗ. ಇವರಿಗೆ ಸದಾ ಬೆಂಬಲ ನೀಡುವೆ
-ಚೇತನ್, ಚಿತ್ರನಟ

ಹೋರಾಟಕ್ಕೆ ಜಯ ಸಿಕ್ಕಿದೆ:

ಕಳೆದ ನಾಲ್ಕು ದಿನಗಳಿಂದ ನಡೆದ ಅಹೋರಾತ್ರಿ ಧರಣಿಗೆ ಜಯ ಸಿಕ್ಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಎ.19ರ ಬದಲಾಗಿ ಎ.10ರಂದು ಸಭೆ ಕರೆದಿದ್ದಾರೆ. ಅಲ್ಲದೆ, ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದರೆ, ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು.
- ಎಸ್.ವರಲಕ್ಷ್ಮೀ, ಅಧ್ಯಕ್ಷೆ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News