ಆನೆ ದಾಳಿಗೆ ಕಾಲೇಜು ವಿದ್ಯಾರ್ಥಿನಿ ಬಲಿ; ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಧರಣಿ
ಸಿದ್ದಾಪುರ, ಮಾ.24: ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಪಾಲಿಬೆಟ್ಟ ಸಮೀಪದ ತಾರಿಕಟ್ಟೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದ್ದು, ಆಕ್ರೋಷಗೊಂಡ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾಡಾನೆ ಹಾವಳಿ ತಡೆಗೆ ಒತ್ತಾಯಿಸಿ ರಸ್ತೆ ತಡೆ ಮಾಡಿ ಧರಣಿ ನಡೆಸಿದ ಘಟನೆ ನಡೆದಿದೆ.
ತಾರಿಕಟ್ಟೆಯ ಮುಸ್ತಫ ಸೈನ ದಂಪತಿಗಳ ಪುತ್ರಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪಿ.ಎಂ ಸಫಾನ (19) ಮೃತಪಟ್ಟ ವಿದ್ಯಾರ್ಥಿನಿ.
ಜಿಲ್ಲೆಯಲ್ಲಿ ಕಾಡಾನೆ ದಾಳಿ ನಿರಂತರವಾಗಿ ನಡೆಯುತ್ತಿರುವ ಹಿನ್ನಲೆ ತಾರಿಕಟ್ಟೆಯ ಮುಸ್ತಫ ಎಂಬವರು ತಮ್ಮ ಮಕ್ಕಳಿಗೆ ಕಾಲೇಜಿಗೆ ತೆರಳಲು ಬೈಕನ್ನು ಖರೀದಿ ಮಾಡಿ ನೀಡಲಾಗಿತ್ತು. ಎಂದಿನಂತೆ ಶುಕ್ರವಾರ ಬೆಳಗ್ಗೆ ಸಫಾನ ಮತ್ತು ತಮ್ಮ ಅಣ್ಣನಾದ ಕಾವೇರಿ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿ ಶಾಕಿರ್ ಜೊತೆ ಬೈಕಿನಲ್ಲಿ ಮನೆಯಿಂದ ತೆರಳಿದ್ದು, ಅಂದಾಜು 500 ಮೀಟರ್ ದೂರ ಸಾಗುವಷ್ಟರಲ್ಲಿ ಎದುರಿಗೆ ಬಂದ ಕಾಡಾನೆಯೊಂದು ಬೈಕಿನ ಮೇಲೆ ಧಾಳಿ ಮಾಡಿದೆ.
ಪರಿಣಾಮ ಇಬ್ಬರೂ ಓಡಲು ಪ್ರಯತ್ನಿಸಿದೆಯಾದರೂ ಅವರನ್ನು ಬೆನ್ನಟ್ಟಿದ ಕಾಡಾನೆ ಸಫಾನ ಮೇಲೆ ಧಾಳಿ ನಡೆಸಿದೆ. ದಾಳಿಯ ರಭಸಕ್ಕೆ ಆನೆಯ ದಂತ ಮುರಿದು ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಸಫಾನ ಸ್ಥಳದಲ್ಲೇ ಮೃತಪಟ್ಟರೆ ಗಾಯಗಳೊಂದಿಗೆ ಶಾಕಿರ್ ಪ್ರಾಣಾಪಾಯದಿಂದ ಪಾರಾಗಿ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ನೂರಾರು ಮಂದಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸ್ಥಳದಲ್ಲಿ ಜಮಾಯಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಮೃತ ಶರೀರವನ್ನು ಗೋಣಿಕೊಪ್ಪಲು ಶವಾಗಾರಕ್ಕೆ ಸಾಗಿಸುವಂತೆ ಮನವಿ ಮಾಡಿದ ಸಂದರ್ಭ ಆಕ್ರೋಷಗೊಂಡ ಜನರು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ಸ್ಥಳದಲ್ಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಪರಿಹಾರದ ಚೆಕ್ ಬಸ್‌ನಲ್ಲಿ ಬರುತ್ತಿದೆ ಸ್ವಲ್ಪ ತಡವಾಗುತ್ತದೆ ಎಂಬ ಅರಣ್ಯಾಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಯ ವಿರುದ್ಧ ಆಕ್ರೋಶಗೊಂಡ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಮಧ್ಯಾಹ್ನ 1 ಗಂಟೆಗೆ ಅರಣ್ಯಾಧಿಕಾರಿಗಳು ಆಗಮಿಸಿ 2 ಲಕ್ಷದ ಚೆಕನ್ನು ಕುಟುಂಬಸ್ಥರಿಗೆ ನೀಡಿದ್ದು, ಮುಂದಿನ 15 ದಿನದೊಳಗೆ ಉಳಿದ 3 ಲಕ್ಷ ನಗದನ್ನು ಕೊಡುವುದಾಗಿ ಬರವಣಿಗೆ ಮೂಲಕ ನೀಡುವುದಾಗಿ ತಿಳಿಸಿದ ಹಿನ್ನಲೆ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಗೋಣಿಕೊಪ್ಪಲು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಮೃತಪಟ್ಟ ಸಫಾನ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು, ಗಾಯಗೊಂಡಿರುವ ಶಾಕಿರ್ ಅವರ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸುವುದರೊಂದಿಗೆ ಕುಟುಂಬದ ಒಬ್ಬರು ಸದಸ್ಯರಿಗೆ ಸರಕಾರಿ ನೌಕರಿ ನೀಡಬೇಕೆಂದು ಒತ್ತಾಯಿಸಿ ಕಾವೇರಿ ಕಾಲೇಜಿನ ತಫ್ಸೀರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಅರಣ್ಯಾಧಿಕಾರಿಗಳಿಗೆ ಮನವಿ ನೀಡಿದರು.
ಡಿಆರ್‌ಎಫ್‌ಓ ಶ್ರೀಪತಿ ಮಾಧ್ಯಮದೊಂದಿಗೆ ಮಾತನಾಡಿ, ಮೃತರ ಕುಟುಂಬಕ್ಕೆ ಈಗಾಗಲೆ 2 ಲಕ್ಷದ ಚೆಕನ್ನು ನೀಡಲಾಗಿದ್ದು, ಮುಂದಿನ 15 ದಿನದೊಳಗೆ ಉಳಿದ 3 ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದ ಅವರು, ವಿದ್ಯಾರ್ಥಿಗಳು ನೀಡಿರುವ ಮನವಿ ಪತ್ರವನ್ನು ಕೂಡಲೇ ಸರಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು.
ಕಾಲೇಜಿನ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಫಾನ:
ವೇರಿ ಕಾಲೇಜಿನ ವಿದ್ಯಾರ್ಥಿಗಳ ಪೈಕಿ ಸಫಾನ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಎಲ್ಲಾ ವಿಷಯಗಳಲ್ಲೂ ಅತೀ ಹೆಚ್ಚು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿ ಸಪಾನ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ನೂರಾರು ಮಂದಿ ಕಾರ್ಮಿಕರ ಸಾವಿಗೆ ಕಾರಣವಾಗಿದ್ದ ಕಾಡಾನೆಗಳು, ಇದೀಗ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಬಲಿ ತೆಗೆದುಕೊಂಡಿರುವುದು ಸರಕಾರಗಳ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿದೆ. ಕಾಡಾನೆ ಹಾವಳಿ ತಡೆಗಟ್ಟಲು ಸೂಕ್ತ ವ್ಯವಸ್ಥೆ ಕಲ್ಪಿಸುವುದರೊಂದಿಗೆ, ಮೃತರ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ, ಕುಟುಂಬದ ಒಬ್ಬರಿಗೆ ಸರಕಾರಿ ಕೆಲಸ ಹಾಗೂ ಪ್ರಜ್ಞಾಹೀನರಾಗಿ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ಶಾಕಿರ್ ಅವರ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದು, ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಕೊಡಗು ಜಿಲ್ಲೆಯಾದ್ಯಂತ ಉಗ್ರ ರೀತಿಯ ಹೋರಾಟ ರೂಪಿಸಲು ಮುಂದಾಗುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.
ಈ ಸಂದರ್ಭ ಎಸ್‌ಡಿಪಿಐ ಪಕ್ಷದ ಇಬ್ರಾಹೀಂ, ಶೌಕತ್ ಅಲಿ, ಬಶೀರ್, ಗೋಣಿಕೊಪ್ಪ ಗ್ರಾ.ಪಂ ಸದಸ್ಯ ಖಲೀಮುಲ್ಲಾ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಬೆಮ್ಮತ್ತಿ ಬಾಪು, ಸುಂಟಿಕೊಪ್ಪ ಉಸ್ಮಾನ್, ಹುಂಡಿಯ ನಜೀರ್, ಉರೈಸ್ ಡಿಎಫ್‌ಓ ಶಂಕರ್, ಆರ್‌ಎಫ್‌ಓ ಗೋಪಾಲ್ ಸೇರಿದಂತೆ ಮತ್ತಿತರರು ಇದ್ದರು.
ಡಿವೈಎಸ್‌ಪಿ ರಂಗಪ್ಪ ಹಾಗೂ ಸಿಐ ದಿವಾಕರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.