ಬೆಳೆಗಾರರ ಗಾಯದ ಮೇಲೆ ಬರೆ ಎಳೆದ ಬರ
ಚಿಕ್ಕಮಗಳೂರು, ಮಾ.24: ಮಲೆನಾಡಿನಲ್ಲಿ ಎದುರಾಗಿರುವ ಭೀಕರ ಬರಗಾಲ ಕಾಫಿ ಬೆಳೆಗಾರರ ಗಾಯದ ಮೇಲೆ ಬರೆ ಎಳೆದಿದೆ. ಬೆಳೆಗಾರರು ಕಾಫಿಯನ್ನು ನೆಚ್ಚಿಕೊಂಡಿದ್ದರೂ ಕಪ್ಪು ವಜ್ರ ಖ್ಯಾತಿಯ ಕಾಳುಮೆಣಸನ್ನು ಪರ್ಯಾಯ ಉಪಬೆಳೆಯಾಗಿ ಆಶ್ರಯಿಸಿದ್ದಾರೆ.
ಈ ಎರಡೂ ಬೆಳೆಗಳಲ್ಲಿ ಒಂದಾದರೂ ಆಪತ್ ಕಾಲದಲ್ಲಿ ಕೈಹಿಡಿಯಬಹುದು ಎನ್ನುವ ಆಲೋಚನೆ ಬೆಳೆಗಾರರಲ್ಲಿತ್ತು. ಮಳೆ ಇಲ್ಲದೆ ನೀರಿನ ಅಭಾವದಿಂದ ಮಲೆನಾಡು ಸುತ್ತಮುತ್ತಲ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಳುಮೆಣಸು, ಕಾಫಿ, ತೆಂಗು ಸೇರಿದಂತೆ ಎಲ್ಲ ಬೆಳೆಯೂ ಸಂಪೂರ್ಣ ನೆಲಕಚ್ಚಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಯಾಗುತ್ತಿಲ್ಲ.
ಹೀಗಾಗಿ ಇತಿಹಾಸದಲ್ಲಿ ಕಂಡು-ಕೇಳರಿಯದ ಬರದಿಂದ ಮೆಣಸಿನ ಬೆಳೆಗೂ ರೋಗಬಾಧೆ ಉಂಟಾಗಿದೆ. ಕಾಳು ಮೆಣಸಿಗೆ ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 600 ರೂ.ಬೆಲೆ ಇದೆ. ಕಪ್ಪುವಜ್ರಕ್ಕೆ ಕಳ್ಳ-ಕಾಕರ ಕಾಟವೂ ಹೆಚ್ಚಿದ್ದು,ಇದರಿಂದಾಗಿ ಕೆಲ ಬೆಳೆಗಾರರು ಇರುವ ಬೆಳೆಯನ್ನೇ ಉಳಿಸಿಕೊಳ್ಳಲಾಗುತ್ತಿಲ್ಲ.ಮಳೆ ಇಲ್ಲದೆ ಶೇ.50-60ರಷ್ಟು ಬೆಳೆ ಹಾಳಾಗಿದ್ದರೆ, ಅಳಿದುಳಿದ ಬೆಳೆಗಳು ಬಿಸಿಲ ಬೇಗೆಗೆ ನೆಲಕ್ಕೆ ಉದುರುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಧ್ಯ ಪ್ರವೇಶಿಸಿ ಸಮರ್ಪಕ ಬೆಳೆ ನಷ್ಟ ಪರಿಹಾರ ನೀಡುವಂತೆ ಬೆಳೆಗಾರರು ಆಗ್ರಹಿಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 56,995 ಹೆಕ್ಟೇರ್ ಭೂಮಿಯಲ್ಲಿ ಅರೇಬಿಕಾ ಮತ್ತು 31,565 ಹೆಕ್ಟೇರ್‌ನಷ್ಟು ಭೂಮಿಯಲ್ಲಿ ರೋಬೋಸ್ಟಾ ಬೆಳೆಯಲಾಗಿದೆ. ಅಷ್ಟು ಪ್ರದೇಶದಲ್ಲೂ ಪರ್ಯಾಯ ಉಪಬೆಳೆಯಾಗಿ ಮೆಣಸನ್ನು ಬೆಳೆಯಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ದರದ ಮೇಲೆ ನಡೆಯುವ ಕಣ್ಣಾಮುಚ್ಚಾಲೆ ಆಟದಿಂದ ಬೆಳೆಗಾರರು ಕಾಫಿಗೆ ಕೊಡುವಷ್ಟೆ ಪ್ರಾಮುಖ್ಯತೆಯನ್ನು ಕಾಳು ಮೆಣಸಿನ ಬೆಳೆಗೂ ಕೊಡುತ್ತಾರೆ.
ಈ ಬಾರಿಯ ಭೀಕರ ಬರಗಾಲದ ಪರಿಣಾಮದಿಂದ ಕಾಫಿ ಹಾಗೂ ಮೆಣಸು ಎರಡೂ ಬೆಳೆಗಳು ಸಂಪೂರ್ಣ ನೆಲಕಚ್ಚುತ್ತಿವೆ. ಇದರಿಂದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನೀರಿನ ಸಮಸ್ಯೆಯಿಂದ ಮೆಣಸಿನ ಬಳ್ಳಿಗಳೇ ಒಣಗಿ ಕೆಲವೆಡೆ ಹೂಗಳು ಮಣ್ಣು ಪಾಲಾಗುತ್ತಿವೆ. ಈ ವರ್ಷ ಸಮೃದ್ಧ ಮಳೆ ಬಂದರೂ ಮುಂದಿನ ಎರಡು ವರ್ಷ ಕಾಫಿ ಹಾಗೂ ಮೆಣಸು ಬೆಳೆ ಫಸಲು ಬರಲು ಸಾದ್ಯವಿಲ್ಲ.
ಮಹೇಶ್, ಕಾಳು ಮೆಣಸಿನ ಬೆಳೆಗಾರ