​ಕುಷ್ಟಗಿಯಲ್ಲಿ ಭಗ್ನ ಪ್ರೇಮಿಯಿಂದ ಹಲ್ಲೆಗೊಳಗಾದ ಪ್ರೇಯಸಿ ಸಾವು

Update: 2017-03-25 17:44 GMT

ಕುಷ್ಟಗಿ, ಮಾ.25: ಕುಷ್ಟಗಿಯಲ್ಲಿ ಮದುವೆಗೆ ನಿರಾಕರಿಸಿದ ಆರೋಪದಲ್ಲಿ ಪ್ರಿಯಕರನಿಂದ ಗಂಭೀರ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ  ಪ್ರೇಯಸಿಶಹನಾಝ್‌  ಬೇಗಂ  ಇಂದು ರಾತ್ರಿ ಮೃತಪಟ್ಟಿದ್ದಾರೆ.
ಯಲಬುರ್ಗಿ ತಾಲೂಕಿನ ಚೌಡಾಪುರ ಗ್ರಾಮದ  ಶಹನಾಝ್‌  ಬೇಗಂ ಎಂಬವರೇ  ಪ್ರಿಯಕರನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಯುವತಿ .

ಈಕೆ ಕುಷ್ಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. 
ಶಹನಾಝ್  ಮತ್ತು   ಅಕೆಯ ತಾಯಿ ಕಮಲಾಬಿ  ಎಂಬವರಿಗೆ ಕುಷ್ಠಗಿಯಲ್ಲಿ ಗಂಗಾವತಿ ತಾಲೂಕಿನ ಸಾಲುಂಚಿಮರ ನಿವಾಸಿ ಅಮರೇಗೌಡ ಚಾಕುವಿನಿಂದ ಇರಿದು ಬಳಿಕ ಅವರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ  ಕೊಲ್ಲಲು  ಯತ್ನ ನಡೆಸಿದ್ದನು.
ಘಟನೆ ವಿವರ: ಯಲಬುರ್ಗಿ ತಾಲೂಕಿನ ಚೌಡಾಪುರ ಗ್ರಾಮದಬಶಹನಾಝ್‌  ಬೇಗಂ ಮತ್ತು ಅಮರೇಗೌಡ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಶಹನಾಝ್‌ಗೆ ಬೇರೆ ಹುಡುಗನೆ ಜೊತೆ ವಿವಾಹ ನಿಶ್ಚಯವಾಗಿತ್ತು. ಇದರಿಂದ ಅಮರೇಗೌಡ ಸಿಟ್ಟಾಗಿದ್ದನು. 

ಇಂದು ಶಹನಾಜ್ ಮತ್ತು ಆಕೆಯ ತಾಯಿ  ಕುಷ್ಟಗಿಗೆ ತೆರಳಲು ಮುದೆನೂರ್ ಬಳಿ ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಭಗ್ನ ಪ್ರೇಮಿ ಅಮರೇಶ್ ಎಂಬಾತನು  ತಾಯಿ ಮತ್ತು ಮಗಳಿಗೆ ಲಿಫ್ಟ್ ಕೊಡುವುದಾಗಿ ಹೇಳಿ, ಬೈಕ್ ಹತ್ತಿಸಿಕೊಂಡಿದ್ದಾನೆ. ಆದರೆ ಕುಷ್ಟಗಿ ಸಮೀಪ ಬರುತ್ತಿದ್ದಂತೆ ಬೈಕ್ ನಿಲ್ಲಿಸಿ, ಚಾಕುವಿನಿಂದ ಶಹನಾಝ್  ಅವರ  ಕುತ್ತಿಗೆ ಕತ್ತರಿಸಿದ್ದಾನೆ. ಮಗಳ ನೆರವಿಗೆ ಧಾವಿಸಿದ   ತಾಯಿ ಕಮಲಾಬಿ  ಮೇಲೂ ಹಲ್ಲೆ ನಡೆಸಿದ  ಆರೋಪಿ ಅವರ ಮೇಲೆ ಪೆಟ್ರೋಲ್‌ ಸುರಿದು ಕೊಲೆಗೆ ಯತ್ನ ನಡೆಸಿ  ಪರಾರಿಯಾಗಿದ್ದನು.

ಗಂಭೀರ ಗಾಯಗೊಂಡಿದ್ದ ಶಹನಾಝ್‌ ಬೇಗಂ ಮತ್ತು ಆಕೆಯ ತಾಯಿ ಕಮಲಾಬಿಯ ನರಳಾಟವನ್ನು ಗಮನಿಸಿದ  ಸ್ಥಳೀಯರು ಬಳಿಕ  ಕುಷ್ಟಗಿ ಆಸ್ಪತ್ರೆಗೆ ದಾಖಲಿಸಿದ್ದರು. 
ಹೆಚ್ಚಿನ ಚಿಕಿತ್ಸೆಗಾಗಿ ಶಹನಾಝ್‌ ಬೇಗಂ ಅವರನ್ನು  ಬಳಿಕ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶಹನಾಝ್‌ ಬೇಗಂ ಮೃತಪಟ್ಟಿದ್ದಾರೆ. 
ಆರೋಪಿ ಅಮರೇಗೌಡ ತಲೆಮರೆಸಿಕೊಂಡಿದ್ದಾನೆ.                                                                                                                            

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News