ಗರ್ಭಪಾತ ಮಾತ್ರೆ ಸೇವಿಸಿ ಗರ್ಭಿಣಿ ಸಾವು
ಕೊರಟಗೆರೆ,ಮಾ.26: ಹೆಣ್ಣು ಮಗುವೇ ಹುಟ್ಟಬಹುದೆಂಬ ಭೀತಿಯಿಂದ ಆರು ತಿಂಗಳ ಗರ್ಭಿಣಿಯೊಬ್ಬರು ಗರ್ಭಪಾತ ಮಾತ್ರೆ ಸೇವಿಸಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದಿದೆ
ಕಾಮರಾಜನ ಹಳ್ಳಿ ಗ್ರಾಮದ ನಿವಾಸಿ ರಾಧಾಮಣಿ (25) ಮೃತಪಟ್ಟ ದುರ್ದೈವಿ. ರಾಮಯ್ಯ ಮತ್ತು ರಾಧಾಮಣಿ ದಂಪತಿಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದು , ಈಗ ಮತ್ತೆ 6 ತಿಂಗಳ ಗರ್ಭಿಣಿಯಾಗಿದ್ದರು.
ನಾಲ್ಕನೆಯದು ಹೆಣ್ಣು ಮಗು ಆಗಬಹುದೆಂಬ ಭೀತಿಯಿಂದ ಮಾ.24ರಂದು ಕೊರಟಗೆರೆ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಮಂಜುಳಾ ಎಂಬವರು ಗರ್ಭಪಾತದ ಮಾತ್ರೆ ನೀಡಿದ್ದರು. ಮಾತ್ರೆ ಸೇವಿಸಿದ ನಂತರ ತೀವ್ರ ರಕ್ತಸ್ರಾವದಿಂದಾಗಿ ರಾಧಾಮಣಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಕೊರಟಗೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾಧಾಮಣಿ ಇಂದು ಸಾವನ್ನಪ್ಪಿದ್ದಾರೆ.
ಗರ್ಭಿಣಿ ರಾಧಾಮಣಿ ಸಾವಿಗೆ ನರ್ಸ್ ಮಂಜುಳಾ ಅವರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಕೊರಟಗೆರೆಯಲ್ಲಿ ರಾಧಾಮಣಿಯ ಸಂಬಂಧಿಕರು ನರ್ಸ್ ಮಂಜುಳಾ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.