ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಪೊಲೀಸ್ ಇಲಾಖೆ ಸಮರ !
ಶಿವಮೊಗ್ಗ, ಮಾ. 26: ಕಳೆದ ವರ್ಷ ಶಿವಮೊಗ್ಗ ನಗರದ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿ,ದಂಧೆಕೋರರ ನಿದ್ದೆಗೆಡುವಂತೆ ಮಾಡಿತ್ತು. ಇದೀಗ ಭದ್ರಾವತಿ ಪಟ್ಟಣದತ್ತ ಚಿತ್ತ ಹರಿಸಿರುವ ಪೊಲೀಸ್ ಇಲಾಖೆಯು, ನಾಗರಿಕರ ಪಾಲಿಗೆ ಕಂಟಕಪ್ರಾಯವಾಗಿ ಪರಿಣಮಿಸಿದ್ದ ಮೀಟರ್‌ಬಡ್ಡಿ ದಂಧೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.
ಶನಿವಾರ ಸಂಜೆ ಭದ್ರಾವತಿ ಪಟ್ಟಣ ಹಾಗೂ ಹೊರವಲಯಗಳಲ್ಲಿ ಕಾನೂನುಬಾಹಿರವಾಗಿ ಬಡ್ಡಿ ದಂಧೆ ನಡೆಸುತ್ತಿದ್ದವರ ಮನೆಗಳ ಮೇಲೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಕೆಲವೇ ಗಂಟೆಗಳಲ್ಲಿ, ಪ್ರತ್ಯೇಕ ತಂಡಗಳಲ್ಲಿ 17 ಕಡೆ ದಾಳಿ ನಡೆಸಿರುವ ಪೊಲೀಸರು ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇರೆಗೆ ಏಳು ಜನರನ್ನು ಬಂಧಿಸಿದ್ದಾರೆ.
ಶೇಖರಪ್ಪ, ಉಗ್ರಯ್ಯ, ಚಂದ್ರಮ್ಮ, ಶ್ರೀನಿವಾಸ್, ಪ್ರಕಾಶ್, ಅಜಯ್ ಹಾಗೂ ಅಶೋಕ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರ ವಿರುದ್ಧ, ಮಿತಿಮೀರಿದ ಬಡ್ಡಿ ವಿಧಿಸುವಿಕೆ ಅಧಿನಿಯಮ 2004, ಲೇವಾದೇವಿ ವ್ಯವಹಾರ ಕಾಯ್ದೆ, ಐಪಿಸಿ ಕಲಂ 420ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಹೊಸಮನೆ ಪೊಲೀಸ್ ಠಾಣೆಯಲ್ಲಿ 2, ಹಳೇನಗರ ಹಾಗೂ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಎಫ್‌ಐಆರ್ ದಾಖಲಾಗಿದೆ.
ವಶಕ್ಕೆ : ಬಂಧಿತ ಆರೋಪಿಗಳಿಂದ 63 ಚೆಕ್‌ಗಳು, 61 ಪ್ರೊನೋಟ್, 174 ವಾಹನಗಳ ದಾಖಲೆ, 10 ಜಮೀನುಗಳ ದಾಖಲಾತಿ, 29 ಬೈಕ್ ಕೀಗಳು, 32 ಎಟಿಎಂ ಹಾಗೂ ಬ್ಯಾಂಕ್‌ಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಭದ್ರಾವತಿ ಡಿವೈಎಸ್ಪಿ ಟಿ.ಜೆ.ಉದೇಶ್, ಡಿಸಿಬಿ ಇನ್‌ಸ್ಪೆೆಕ್ಟರ್ ಕುಮಾರ್, ಭದ್ರಾವತಿಯ ಇನ್‌ಸ್ಪೆಕ್ಟರ್‌ರಗಳಾದ ರುದ್ರೇಶ್, ವರದರಾಜ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ಸಂಚಲ : ಇತ್ತೀಚಿನ ವರ್ಷಗಳಲ್ಲಿ ಭದ್ರಾವತಿ ಪಟ್ಟಣದಲ್ಲಿ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ್ದ ಪೊಲೀಸ್ ಇಲಾಖೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿರಲಿಲ್ಲ. ಪೊಲೀಸರು ಪಟ್ಟಣದ ವಿವಿಧ ದಾಳಿಯಲ್ಲಿ ಭಾಗಿಯಾಗಿದ್ದ ವಿಷಯ ಅರಿತ ಹಲವು ದಂಧೆಕೋರರು ಮನೆಗಳಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ದಾಳಿಯು ಪಟ್ಟಣದಾದ್ಯಂತ ನಾಗರಿಕರ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಪೊಲೀಸ್ ಇಲಾಖೆಯ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಭದ್ರಾವತಿ ಪಟ್ಟಣದಲ್ಲಿ ಮೀಟರ್ ಬಡ್ಡಿ ದಂಧೆಕೋರರು ಭಾರೀ ಸಂಖ್ಯೆಯಲ್ಲಿದ್ದಾರೆ. ಕಳೆದ ಹಲವು ವರ್ಷಗಳಿಂದ ನಿರಾತಂಕವಾಗಿ ತಮ್ಮ ದಂಧೆ ನಡೆಸಿಕೊಂಡು ಬರುತ್ತಿದ್ದಾರೆ. ಇವರಿಂದ ಸಾಲ ಪಡೆದ ಅದೆಷ್ಟ್ಟೋ ಜನರು ದುಬಾರಿ ಬಡ್ಡಿಯ ಕಾರಣದಿಂದ ಪಡೆದ ಹಣ ಹಿಂದಿರುಗಿಸಲು ಸಾಧ್ಯವಾಗದೆ ತಮ್ಮ ಬಳಿಯಿದ್ದ ಚರ-ಸ್ಥಿರಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ನಾನಾ ರೀತಿಯ ಹಿಂಸೆಗೆ ತುತ್ತಾಗಿದ್ದಾರೆ.
ಇದೀಗ ಪೊಲೀಸ್ ಇಲಾಖೆಯು ಈ ದಂಧೆಕೋರರ ವಿರುದ್ದ ಕಠಿಣ ಕ್ರಮ ಜರಗಿಸಲು ಮುಂದಾಗಿರುವುದು ನಿಜಕ್ಕೂ ಅಭಿನಂದನೀಯವಾಗಿದೆ. ಇದರಿಂದ ಹಲವು ಕುಟುಂಬಗಳು ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗುವಂತಾಗಿದೆ. ಪೊಲೀಸರು ನಿರಂತರವಾಗಿ ಈ ರೀತಿಯ ಕಾರ್ಯಾಚರಣೆ ನಡೆಸಬೇಕು ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆಯ ವ್ಯಾಪಾರಿಯೋರ್ವರು ಹೇಳುತ್ತಾರೆ.
ದಂಧೆಕೋರರಲ್ಲಿ ಶುರುವಾಗಿದೆ ನಡುಕ:
ಭದ್ರಾವತಿ ಪಟ್ಟಣದಲ್ಲಿ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಪೊಲೀಸ್ ಇಲಾಖೆ ಕಾರ್ಯಾಚರಣೆಗಿಳಿದು ಹಲವರನ್ನು ಬಂಧಿಸುತ್ತಿದ್ದಂತೆ, ದಂಧೆಯಲ್ಲಿ ತೊಡಗಿದ್ದವರಲ್ಲಿ ನಡುಕ ಶುರುವಾಗಿದೆ. ಬಂಧನದ ಭೀತಿಯ ಹಿನ್ನೆಲೆಯಲ್ಲಿ, ಈಗಾಗಲೇ ಹಲವು ದಂಧೆಕೋರರು ಪಟ್ಟಣ ತೊರೆದು ತಲೆಮರೆಸಿಕೊಳ್ಳಲಾರಂಭಿಸಿದ್ದಾರೆ. ಮತ್ತೊಂದೆಡೆ ಪೊಲೀಸರು ಕೂಡ ದಂಧೆಕೋರರ ಹೆಡೆಮುರಿಕಟ್ಟಲು ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟು ದಿನ ದಂಧೆಕೋರರ ವಿರುದ್ದ ದೂರು ನೀಡಲು ಭಯಬೀಳುತ್ತಿದ್ದ ನಾಗರಿಕರು ಇದೀಗ ಪೊಲೀಸ್ ಠಾಣೆಗಳಿಗೆ ಆಗಮಿಸಿ ದಂಧೆಕೋರರ ವಿರುದ್ಧ ಮಾಹಿತಿ ನೀಡಲಾರಂಭಿಸಿದ್ದಾರೆ.