×
Ad

ಗರ್ಭದಲ್ಲಿ ಶಿಶು ಮರಣ: ಜಿಲ್ಲಾಸ್ಪತ್ರೆ ವಿರುದ್ಧ ಕುಟುಂಬಿಕರ ಅಸಮಾಧಾನ

Update: 2017-03-28 00:04 IST

ಮಡಿಕೇರಿ, ಮಾ.27: ಗರ್ಭಿಣಿಯೊಬ್ಬರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ವೈದ್ಯರು ಹಾಗೂ ಸಿಬ್ಬಂದಿ ವಿಳಂಬಿಸಿದ ಪರಿಣಾಮ ಹೊಟ್ಟೆಯಲ್ಲೇ ಶಿಶು ಮೃತಪಟ್ಟಿದೆ ಎಂದು ಗರ್ಭಿಣಿಯ ಕುಟುಂಬ ವರ್ಗ ಜಿಲ್ಲಾಸ್ಪತ್ರೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪ್ರಕರಣ ಸೋಮವಾರ ನಡೆದಿದೆ.

ಮರಗೋಡು ನಿವಾಸಿ ಪ್ರಭಾಕರ್ ಎಂಬವರ ಪತ್ನಿ ಸುಮಾ ಗರ್ಭಿಣಿಯಾಗಿದ್ದು, ನಗರದ ಖಾಸಗಿ ಕ್ಲಿನಿಕ್‌ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರು. ರವಿವಾರ ಸುಮಾ ಅವರು ಪರೀಕ್ಷೆಗೆಂದು ಕ್ಲಿನಿಕ್‌ಗೆ ತೆರಳಿದ ಸಂದರ್ಭ ಅಲ್ಲಿನ ವೈದ್ಯರು ಹೊಟ್ಟೆಯಲ್ಲಿ ನೀರು ತುಂಬಿರುವುದರಿಂದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗುವಂತೆ ಸೂಚಿಸಿದರು ಎನ್ನಲಾಗಿದೆ. ತಕ್ಷಣ ಸುಮಾ ಅವರನ್ನು ಜಿಲ್ಲಾಸ್ಪತ್ರೆಗೆ ಕರೆತಂದಾಗ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡುವಂತೆ ಸೂಚಿಸಿದ್ದಾರೆ. ರವಿವಾರವಾಗಿದ್ದ ಕಾರಣ ಸ್ಕ್ಯಾನಿಂಗ್ ಸೆಂಟರ್‌ಗಳು ಬಂದ್ ಇರುವ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳಿಗೆ ಕುಟುಂಬಿಕರು ತಿಳಿಸಿದ್ದರು ಎನ್ನಲಾಗಿದೆ.

ಬೆಳಗ್ಗೆ 10 ಗಂಟೆ ಸುಮಾರಿಗೆ ಜಿಲ್ಲಾಸ್ಪತ್ರೆಗೆ ಬಂದಿದ್ದರೂ, ಸಂಜೆ 4 ಗಂಟೆಯವರೆಗೂ ಸುಮಾ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡದೆ ಹೊರಗೆ ಕೂರಿಸಿದ್ದರು ಎಂದು ಕುಟುಂಬಸ್ಥರಾದ ರಾಜೇಶ್ ಆರೋಪಿಸಿದ್ದಾರೆ.

ಬಳಿಕ ಸುಮಾ ಕುಟುಂಬಿಕರು ಆಸ್ಪತ್ರೆಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ ಬಳಿಕ ಸಂಜೆ 4:45ರ ವೇಳೆ ದಾಖಲಿಸಿಕೊಂಡ ವೈದ್ಯರು ಪರೀಕ್ಷೆ ನಡೆಸಿ, ಶಿಶು ಹೊಟ್ಟೆಯಲ್ಲಿಯೇ ಮರಣ ಹೊಂದಿದೆ ಎಂದು ಮಾಹಿತಿ ನೀಡಿದರು ಎಂದು ರಾಜೇಶ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯವೇ ಶಿಶುವಿನ ಸಾವಿಗೆ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು, ಬೆಳಗ್ಗೆ 10 ಗಂಟೆಯಿಂದ ಸಂಜೆ ಯವರೆಗೂ ಗರ್ಭಿಣಿ ಯೊಬ್ಬರನ್ನು ದಾಖಲಿಸಿಕೊಳ್ಳದಿರುವುದು ಅಮಾನವೀಯ ವರ್ತನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಕಾನಿಂಗ್ ವಿಭಾಗಕ್ಕೆ 11 ಬಾರಿ ಅರ್ಜಿ ಆಹ್ವಾನ
ಘಟಕಕ್ಕೆ ಒಬ್ಬರು ವೈದ್ಯರು ಮತ್ತು ಇಬ್ಬರು ಸಹಾಯಕರ ಅಗತ್ಯವಿದೆ. ಈ ವರೆಗೆ 11 ಬಾರಿ ವೈದ್ಯರ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಯಾರೂ ಹುದ್ದೆಯನ್ನರಸಿ ಬಂದಿಲ್ಲ. 12ನೆ ಸಂದರ್ಶನವನ್ನು ಎಪ್ರಿಲ್ 7ಕ್ಕೆ ನಿಗದಿಪಡಿಸಲಾಗಿದ್ದು, ವೈದ್ಯರು ಬರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಜಿಲ್ಲಾ ಸರ್ಜನ್ ಡಾ. ಅಬ್ದುಲ್ ಅಝೀಝ್ ಅಸಹಾಯಕತೆ ವ್ಯಕ್ತ ಪಡಿಸುತ್ತಿದ್ದಾರೆ.

6 ತಿಂಗಳಿನಿಂದ ಸ್ಕ್ಯಾನಿಂಗ್ ಘಟಕಕ್ಕೆ ಬೀಗ

ಜಿಲ್ಲಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಘಟಕದ ವೈದ್ಯರು ಕಳೆದ 6 ತಿಂಗಳ ಹಿಂದೆ ಸ್ವಯಂ ನಿವೃತ್ತಿ ಹೊಂದಿದ್ದರು. ಆ ಬಳಿಕ ಈ ಘಟಕಕ್ಕೆ ವೈದ್ಯರ ಲಭ್ಯವಾಗಿಲ್ಲ. ಅಲ್ಲದೆ, ಕಳೆದ ಆರು ತಿಂಗಳುಗಳಿಂದ ಸ್ಕಾನಿಂಗ್ ಘಟಕಕ್ಕೆ ಬೀಗ ಜಡಿಯಲಾಗಿದೆ.

ಶಿಶು ಸಾವಿಗೆ ಆಸ್ಪತ್ರೆ ಕಾರಣವಲ್ಲ: ಜಿಲ್ಲಾಸ್ಪತ್ರೆಯ ಸ್ಪಷ್ಟೀಕರಣ

ಹೊಟ್ಟೆಯಲ್ಲಿ ಮಗುವಿನ ಚಲನವಲನವಿಲ್ಲವೆಂದು ಸುಮಾ ಅವರು ಆಸ್ಪತ್ರೆಗೆ ಆಗಮಿಸಿದ್ದರು. ಈ ಸಂದರ್ಭ ಪರೀಕ್ಷೆಗೆ ಒಳಪಡಿಸಿದಾಗ ಶಿಶು ಹೊಟ್ಟೆಯಲ್ಲಿ ಮೃತಪಟ್ಟಿರುವುದು ಕಂಡು ಬಂತು. ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿರುವುದರಿಂದ ಸ್ಕ್ಯಾನಿಂಗ್ ಮಾಡಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾ ಸರ್ಜನ್ ಡಾ. ಅಬ್ದುಲ್ ಅಝೀಝ್ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News